ಪ್ರಿಯಾಂಕಾ ರಂಗಪ್ರವೇಶ: ಶಿವಸೇನೆ ಹೇಳಿದ್ದೇನು?

Update: 2019-01-24 03:42 GMT

ಮುಂಬೈ, ಜ.24: ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಗಣನೀಯ ಲಾಭವಾಗಲಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ. ಪ್ರಿಯಾಂಕಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದು, ಅಜ್ಜಿ ಇಂದಿರಾ ಗಾಂಧಿಯ ಹಲವು ಗುಣಗಳು ಕಾಣಿಸುತ್ತವೆ ಎಂದು ಹೇಳಿಕೆ ನೀಡಿದೆ.

ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿಯವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪೂರ್ವ ಉತ್ತರ ಪ್ರದೇಶಕ್ಕೆ ನೇಮಕ ಮಾಡುವ ಮೂಲಕ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದಂತಾಗಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಹುಮ್ಮಸ್ಸಿನಿಂದ ಪಕ್ಷವನ್ನು ಮುನ್ನಡೆಸುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ.

ಪಿಟಿಐ ಜತೆ ಮಾತನಾಡಿದ ಶಿವಸೇನೆ ವಕ್ತಾರೆ ಮನಿಷಾ ಕಯಂಡೆ, ಕಾಂಗ್ರೆಸ್‌ಗೆ ಸಂಭ್ರಮಿಸಲು ಪ್ರಬಲ ಕಾರಣಗಳಿವೆ. ಇದುವರೆಗೆ ಕಾಂಗ್ರೆಸ್ ಸರಹದ್ದಿನಲ್ಲಿದ್ದ ಪ್ರಿಯಾಂಕಾ ಗಾಂಧಿ ಇದೀಗ ಸಕ್ರಿಯ ರಾಜಕೀಯದ ಭಾಗವಾಗಿದ್ದಾರೆ. ಆಕೆಯ ಒಳ್ಳೆಯ ವ್ಯಕ್ತಿತ್ವದಿಂದಾಗಿ ಕಾಂಗ್ರೆಸ್‌ಗೆ ಲಾಭವಾಗಲಿದೆ. ತನ್ನನ್ನು ತಾನು ಅಭಿವ್ಯಕ್ತಪಡಿಸುವ ಸಾಮರ್ಥ್ಯ ಹಾಗೂ ಮತದಾರರನ್ನು ಸೆಳೆಯುವ ಕೌಶಲ ಆಕೆಗೆ ಇದೆ. ಅಜ್ಜಿಯ ಗುಣಗಳು ಅವರಲ್ಲಿ ಬಹಳಷ್ಟಿವೆ ಎಂದು ಮನಿಷಾ ಹೇಳಿದ್ದಾರೆ. "ಮತ ಹಾಕಲು ಹೋಗುವಾಗ ಜನ, ಪ್ರಿಯಾಂಕಾ ಗಾಂಧಿಯಲ್ಲಿ ಇಂದಿರಾರನ್ನು ಕಾಣಲಿದ್ದಾರೆ" ಎಂದು ಬಣ್ಣಿಸಿದ್ದಾರೆ.

ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಕೂಡಾ, ಪ್ರಿಯಾಂಕಾ ಅವರ ಅಧಿಕೃತ ಪ್ರವೇಶದಿಂದ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ವಿಶೇಷ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News