ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ: ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಕೆ- ಡಿಸಿಎಂ ಪರಮೇಶ್ವರ್

Update: 2019-01-24 13:55 GMT

ಬೆಂಗಳೂರು, ಜ. 24: ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ತನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದು, ಸೂಕ್ತ ತನಿಖೆ ನಡೆಸಿ ಶೀಘ್ರದಲ್ಲೆ ಪಕ್ಷಕ್ಕೆ ವರದಿ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈಗಾಗಲೇ ಶಾಸಕ ಆನಂದ ಸಿಂಗ್ ಅವರ ದೂರಿನ ಆಧಾರದ ಮೇಲೆ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಗಣೇಶನನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಗಣೇಶ್ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಜೊತೆಗೆ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸೂಕ್ತ ರೀತಿಯಲ್ಲಿ ತನಿಖೆ, ಕೂಲಂಕಷ ಪರಿಶೀಲನೆ ನಡೆಸಿ ಪಕ್ಷಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಪರಮೇಶ್ವರ್ ಇದೇ ವೇಳೆ ಹೇಳಿದರು.

ಬೆಳೆಸುವುದು ಬೇಡ: ಸಿದ್ದಗಂಗಾ ಶ್ರೀಗಳ ಗದ್ದುಗೆ ಒಳಗೆ ಪ್ರವೇಶಿಸಲು ಕೆಲವರ ಹೆಸರನ್ನಷ್ಟೇ ಅಂತಿಮಗೊಳಿಸಲಾಗಿತ್ತು. ಕಿರಿಯ ಸ್ವಾಮಿ ಈ ಪಟ್ಟಿ ತಯಾರಿಸಿದ್ದರು. ಇದರ ಜವಾಬ್ದಾರಿಯನ್ನು ಎಸ್ಪಿ ದಿವ್ಯಾ ಅವರಿಗೆ ನೀಡಲಾಗಿತ್ತು. ಅವರಿಗೆ ಸಚಿವರ ಮುಖ ಪರಿಚಯ ಇಲ್ಲವೆನಿಸುತ್ತದೆ. ಯಾವುದೂ ಉದ್ದೇಶಪೂರ್ವಕವಾಗಿ ನಡೆದಿಲ್ಲ. ಇದನ್ನು ದೊಡ್ಡದಾಗಿ ಬೆಳೆಸದೇ ಇಲ್ಲಿಗೆ ನಿಲ್ಲಿಸುವುದು ಉತ್ತಮ ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News