ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಅಕ್ರಮ: ರಾಜೀವ್ ಗಾಂಧಿ ವಿವಿಯಿಂದ 7 ಕಾಲೇಜುಗಳಿಗೆ ನೋಟಿಸ್
ಬೆಂಗಳೂರು, ಜ.24: ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಹಾಗೂ ದಾಖಲೆಗಳ ತಿದ್ದುಪಡಿಯಲ್ಲಿ ಅಕ್ರಮ ಎಸಗಿರುವ ನಗರದ ಏಳು ಕಾಲೇಜುಗಳಿಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಸಾರ್ವಜನಿಕವಾಗಿ ನೋಟಿಸ್ ಜಾರಿ ಮಾಡಿದೆ.
ಗುರುವಾರ ಜಯನಗರದಲ್ಲಿರುವ ವಿವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕುಲಪತಿ ಸಚ್ಚಿದಾನಂದ ಮಾತನಾಡಿ, ಬೆಥೆಲ್ ಕಾಲೇಜು, ಹಾಸ್‌ಮಾಟ್ ಕಾಲೇಜು, ಗಾಯತ್ರಿ ದೇವಿ ಕಾಲೇಜ್ ಆಫ್ ನರ್ಸಿಂಗ್, ಪಾನ್ ಏಷ್ಯಾ ಕಾಲೇಜ್ ಆಫ್ ನರ್ಸಿಂಗ್ ಸೇರಿದಂತೆ ಏಳು ಕಾಲೇಜುಗಳಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಹೀಗಾಗಿ ಸಿಂಡಿಕೇಟ್ ಸಭೆಯಲ್ಲಿ ಅನುಮತಿ ಪಡೆದು ಸಾರ್ವಜನಿಕವಾಗಿ ನೋಟಿಸ್ ಜಾರಿ ಮಾಡಿದ್ದು, ಈ ಕಾಲೇಜುಗಳ ಪ್ರವೇಶಾತಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಪದವಿ ವಿದ್ಯಾರ್ಥಿಗಳು ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಈ ವರ್ಷದಿಂದ 100 ವಿದ್ಯಾರ್ಥಿಗಳಿಗೆ ಸಂಶೋಧನಾ ಯೋಜನೆ ಮೊತ್ತ 15 ಸಾವಿರ ರೂ. ನೀಡುವುದು ಸೇರಿದಂತೆ ಹತ್ತಾರು ನೂತನ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಆರೋಗ್ಯ ವಿಜ್ಞಾನ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಕೋರ್ಸುಗಳನ್ನು ಪ್ರಾರಂಭಿಸಲು ಸಲಹೆ, ಸೂಚನೆಗಳನ್ನು ಪಡೆಯುವುದಕ್ಕಾಗಿ ಕಮಿಟಿಯನ್ನು ರಚಿಸಲಾಗಿದೆ. ಇದರ ಭಾಗವಾಗಿ ’ಔದ್ಯೋಗಿಕ ಚಿಕಿತ್ಸೆ’ ಎಂಬ ಹೊಸ ಕೋರ್ಸ್ ಅನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯವು ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು.
20 ಕೋಟಿ ರೂ.ಮೀಸಲು: ಸಂಶೋಧನಾ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯವು ವರ್ಷಕ್ಕೆ 20 ಕೋಟಿ ರೂ. ಹಣವನ್ನು ಮೀಸಲಿರಿಸಿದೆ. ಅದೇ ರೀತಿ, ಕಾಲೇಜು ಮಟ್ಟದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ವೈದ್ಯಕೀಯ ಕಾಲೇಜುಗಳು 1 ಕೋಟಿ ರೂ., 50 ಲಕ್ಷ ರೂ. 10 ಲಕ್ಷ ರೂ.ಗಳನ್ನು ಮೀಸಲಿಡಬೇಕೆಂಬ ಒತ್ತಾಯ ನಮ್ಮದು ಎಂದು ಅವರು ಹೇಳಿದರು.
ಕಾಗದ ರಹಿತ: ವಿಶ್ವವಿದ್ಯಾಲಯದಿಂದ ಸಂಯೋಜಿತ ಕಾಲೇಜು, ಬೋಧಕರಿಗೆ, ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಸಂವಹನ ಮುಟ್ಟಿಸುವ ಹಿನ್ನೆಲೆ ಕಾಗದರಹಿತ ವಾತಾವರಣ ನಿರ್ಮಿಸಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಶಿವಾನಂದ ಕಪಾಶಿ, ರಿಜಿಸ್ಟ್ರಾರ್ ಡಾ.ಎಂ.ಕೆ.ರಮೇಶ್ ಮತ್ತಿತರರಿದ್ದರು.