×
Ad

ಲೋಕಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ

Update: 2019-01-24 20:58 IST

ಬೆಂಗಳೂರು, ಜ.24: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಸಿದ್ಧತೆಗಳನ್ನು ಆರಂಭಿಸಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸಭೆ ನಡೆಸಲಾಯಿತು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಭೆಯನ್ನು ನಡೆಸಿದ ಮುಖಂಡರು, ಸಂಸದ ವೀರಪ್ಪ ಮೊಯ್ಲಿ, ಸಚಿವ ಶಿವಶಂಕರರೆಡ್ಡಿ, ಶಾಸಕರಾದ ಡಾ.ಸುಧಾಕರ್, ಸುಬ್ಬಾರೆಡ್ಡಿ, ವೆಂಕಟರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿ.ಪಂ., ತಾ.ಪಂ.ಸದಸ್ಯರೊಂದಿಗೆ ಪ್ರತ್ಯೇಕವಾಗಿ ನಾಯಕರು ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯ ಅಲೆ ವಿರುದ್ಧ ನಮ್ಮ ರಾಜ್ಯದಿಂದ ಕಾಂಗ್ರೆಸ್ ಪಕ್ಷದ 9 ಸಂಸದರು ಆಯ್ಕೆಯಾಗಿದ್ದಾರೆ. ಆದುದರಿಂದ, ಹಾಲಿ ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಅನ್ನೋದು ನಮ್ಮ ಅಭಿಪ್ರಾಯ. ಇನ್ನುಳಿದಂತೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ವೀರಪ್ಪಮೊಯ್ಲಿ ಹೇಳಿದರು.

ಮಾಧ್ಯಮದವರ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ: ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾವಾರು ಸಭೆ ನಡೆಸುವ ವೇಳೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ರನ್ನು ಕ್ಷಮಿಸುವಂತೆ ಅವರ ಬೆಂಬಲಿಗರು ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಇದನ್ನು ಚಿತ್ರೀಕರಣ ಮಾಡಲು ಹೋದ ಮಾಧ್ಯಮದವರ ವಿರುದ್ಧ ಅಸಮಾಧಾನ ಹೊರಹಾಕಿದ ದಿನೇಶ್‌ ಗುಂಡೂರಾವ್, ಇಲ್ಲಿ ಆಂತರಿಕ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ. ಇದನ್ನೆಲ್ಲ ಯಾಕೆ ಚಿತ್ರೀಕರಣ ಮಾಡುತ್ತೀರಾ, ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದರು.

ಕ್ಷಮೆ ಯಾಚನೆ: ಮಾಧ್ಯಮಗಳ ವಿರುದ್ಧ ನೀಡಿದ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ದಿನೇಶ್‌ ಗುಂಡೂರಾವ್, ನನ್ನ ಮಾತಿನಿಂದ ಮಾಧ್ಯಮದವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಕೆಲವೊಮ್ಮೆ ಬಾಯಿ ತಪ್ಪಿಮಾತು ಆಡಿರುತ್ತೇವೆ. ನಿಮಗೆ ಪ್ರಶ್ನೆ ಕೇಳುವ ಹಕ್ಕಿದೆ. ಸಾರ್ವಜನಿಕ ವಲಯದಲ್ಲಿರುವ ನಾವು ಉತ್ತರಿಸಬೇಕು. ಮಾಧ್ಯಮದವರ ಸ್ವಾತಂತ್ರ್ಯವನ್ನ ಒಪ್ಪಿಕೊಳ್ಳುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News