ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಬಿಜೆಪಿಗೆ ಭಯ: ಕೆ.ಸಿ.ವೇಣುಗೋಪಾಲ್
ಬೆಂಗಳೂರು, ಜ.24: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಜನ ವಿರೋಧಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಸೋಲಿಸಲು ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿರುವುದರಿಂದ ಬಿಜೆಪಿಗೆ ಭಯ ಆಗಿದೆ. ಬಿಜೆಪಿಯವರು ನೆಹರು-ಗಾಂಧಿ ಕುಟುಂಬವನ್ನು ಟೀಕಿಸುವ ಮುನ್ನ ಪರಿಜ್ಞಾನ ಇಟ್ಟುಕೊಳ್ಳಲಿ ಎಂದರು.
ಈ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ. ನಮಗೆಲ್ಲ ಈ ಕುಟುಂಬದ ಬಗ್ಗೆ ಹೆಮ್ಮೆಯಿದೆ. ನೆಹರು-ಗಾಂಧಿ ಕುಟುಂಬವನ್ನು ಟೀಕಿಸುವ ಮುನ್ನ, ನಮ್ಮ ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು ಎಂಬುದನ್ನು ತಿಳಿಸಲಿ ಎಂದು ವೇಣುಗೋಪಾಲ್ ಸವಾಲು ಹಾಕಿದರು.
ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಇಂದು ಚರ್ಚೆ ನಡೆಸಿದ್ದೇವೆ. ಈ ಬಾರಿ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತೇವೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾರ್ಯಕರ್ತರ ಅಭಿಪ್ರಾಯವನ್ನು ಕೇಳುತ್ತೇವೆ. ಗೆಲ್ಲುವ ಸಾಮರ್ಥ್ಯ ಇರುವ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗುವುದು ಎಂದು ಅವರು ಹೇಳಿದರು.
ಐದು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಯ ಸಿದ್ಧತೆಗಳ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಚುನಾವಣೆಯಲ್ಲಿ ಸೋತವರು, ಗೆದ್ದವರ ಜೊತೆ ಚರ್ಚೆ ಮಾಡಿದ್ದೇವೆ ಎಂದು ವೇಣುಗೋಪಾಲ್ ಹೇಳಿದರು.
ಈಗಲ್ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್‌ಸಿಂಗ್ ಹಾಗೂ ಜೆ.ಎನ್.ಗಣೇಶ್ ನಡುವೆ ನಡೆದಿರುವ ಹಲ್ಲೆ ಪ್ರಕರಣದಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಿಲ್ಲ. ಘಟನೆ ಜರುಗಿದ ತಕ್ಷಣ ಗಣೇಶ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೇ ಘಟನೆ ಬಿಜೆಪಿಯಲ್ಲಿ ಆಗಿದ್ದರೆ ಶಿಸ್ತು ಕ್ರಮ ಕೈಗೊಳ್ಳುತ್ತಿರಲಿಲ್ಲ. ಈ ಹಲ್ಲೆ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅವರು ತಿಳಿಸಿದರು.