ವಂಚಕ ಕಂಪನಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ: ಆರೋಪಿಗಳ ಕೋಟ್ಯಂತರ ಆಸ್ತಿ ಪತ್ತೆ
ಬೆಂಗಳೂರು, ಜ.24: ಅಜ್ಮೀರಾ ಗ್ರೂಪ್ಸ್ ಕಂಪನಿಯ ವಂಚನೆ ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನ್ಯಾಯಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಆರೋಪಿಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿರುವ ಅಂಶ ಉಲ್ಲೇಖ ಆಗಿದೆ.
ಸಿಸಿಬಿ ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಎಸ್.ಗಿರೀಶ್ ಹಾಗೂ ಎಸಿಪಿ ಪಿ.ಟಿ.ಸುಬ್ರಮಣ್ಯ ಅವರ ವಿಶೇಷ ತಂಡ ತನಿಖೆ ನಡೆಸಿದ್ದು, 350 ಪುಟಗಳ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಆಸ್ತಿ ಜಪ್ತಿ: ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದ, 5,24,61,495 ರೂ. ನಗದು, ಮೈಸೂರಿನ ದೇವನೂರು ಗ್ರಾಮ ಸರ್ವೆ ನಂ 194 ರಲ್ಲಿ ಖರೀದಿ ಮಾಡಿ ಬಡಾವಣೆ ನಿರ್ಮಿಸಿದ್ದ 3 ಎಕರೆ 25 ಗುಂಟೆ ಭೂಮಿ ಹಾಗೂ ಮರಳವಾಡಿ ಹೋಬಳಿ ಚಿಕ್ಕ ಸಾದೇನಹಳ್ಳಿ ಗ್ರಾಮದಲ್ಲಿ 1.18 ಎಕರೆ. ಅದೇ ರೀತಿ, ಜಯನಗರದಲ್ಲೂ 2 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಸಿಸಿಬಿ ತಿಳಿಸಿದೆ.
ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಿನ್ಸಿಪಲ್ ಸಿಟಿ ಸಿವಿಲ್ ಮತ್ತು ಸಿವಿಲ್ ಸತ್ರ (ಸಿಸಿಹೆಚ್-1) ನ್ಯಾಯಾಲಯದ ಅಧೀನಕ್ಕೆ ತಂದು ಈ ಪ್ರಕರಣದಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡ ಸಂತ್ರಸ್ಥರಿಗೆ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಜ್ಮೀರಾ ಗ್ರೂಪ್ಸ್‌ನಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾಗಿರುವವರ ಪೈಕಿ ಈಗಾಗಲೇ ಸುಮಾರು 950 ಮಂದಿ ಸಿಸಿಬಿ ಕಚೇರಿಗೆ ಭೇಟಿ ನೀಡಿ, ನೋಂದಣಿ ಮಾಡಿಕೊಂಡ ಎಂಓಯು ಸಲ್ಲಿಸಿದ್ದಾರೆ. ಈಗಾಗಲೇ 26 ಕೋಟಿ ನೀಡಬೇಕು ಎನ್ನುವ ಅಂಶ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?: 2017ರಲ್ಲಿ ನಗರದ ಜಯನಗರದ 4ನೇ ಬ್ಲಾಕ್‌ನ 9ನೇ ಮುಖ್ಯ ರಸ್ತೆಯಲ್ಲಿ ಅಜ್ಮೀರಾ ಗ್ರೂಪ್ಸ್ ಎಂಬುವ ಸಂಸ್ಥೆ ಹುಟ್ಟು ಹಾಕಿದ ತಬ್ರೇಝ್ ಪಾಷ ಮತ್ತು ಅಬ್ದುಲ್ ದಸ್ತಗೀರ್, ಸಾರ್ವಜನಿಕರು ಹಣ ಹೂಡಿಕೆ ಮಾಡಿದರೆ, ಪ್ರತಿಯಾಗಿ ಪ್ರತಿ ತಿಂಗಳು ಅಧಿಕ ಬಡ್ಡಿ ನೀಡುವುದಾಗಿ ಪ್ರೇರೇಪಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ಆಶ್ವಾಸನೆ ನೀಡಿ, ಬಳಿಕ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿದ್ದರೆಂದು ಜಯನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ತನಿಖೆ ನಡೆಸಿದ ಸಿಸಿಬಿ, ಪ್ರಕರಣದ ಪ್ರಮುಖ ಆರೋಪಿ ಅಜ್ಮೀರಾ ಗ್ರೂಪ್ಸ್‌ನ ಸ್ಥಾಪಕ ತಬ್ರೇಝ್ ಪಾಷ ಹಾಗೂ ತಬ್ರೇಝ್‌ವುಲ್ಲಾ ಶರೀಫ್ ಅನ್ನು ಜ.3ರಂದು ಬಂಧಿಸಿದ್ದರು. ಆರೋಪಿಗಳ ವಿರುದ್ಧ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.