×
Ad

ಬಂಡಾಯ ಸಾಹಿತಿಗೆ ವಿನಯ, ಸಜ್ಜನಿಕೆಯೆ ಭೂಷಣವಾಗಲಿ: ಕವಿ ಸಿದ್ದಲಿಂಗಯ್ಯ

Update: 2019-01-24 22:15 IST

ಬೆಂಗಳೂರು, ಜ.24: ಬಂಡಾಯ ಸಾಹಿತಿಗಳು ವಿನಯ, ವಿಧೇಯತೆ, ಸಜ್ಜನಿಕೆ ಯಿಂದ ಬಂಡಾಯದ ನೈಜ ಅರ್ಥವನ್ನು ಅರಿತು ವೈಚಾರಿಕತೆ, ಪ್ರಗತಿಪರ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಕವಿ ಸಿದ್ದಲಿಂಗಯ್ಯ ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ 2017ನೆ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಲೋಕಾರ್ಪಣೆ ಮಾಡಿದ ಅವರು, ಕೆಲ ಯುವ ಸಾಹಿತಿಗಳು ಬಂಡಾಯ, ಕ್ರಾಂತಿಕಾರಿ ಸಾಹಿತಿಗಳಾಗಲು ಬಯಸುತ್ತಾರೆ. ಇದು ತಪ್ಪಲ್ಲ. ಆದರೆ, ದಾಡಿ ಬೆಳೆಸಿಕೊಂಡು, ಜುಟ್ಟು ಬಿಟ್ಟುಕೊಂಡು ಗಂಭೀರತೆ ರೂಢಿಸಿಕೊಂಡರೆ ಬಂಡಾಯ ಸಾಹಿತಿಗಳಾಗಲು ಸಾಧ್ಯವಿಲ್ಲ. ಸಮಾಜದಲ್ಲಿ ಮನುಷ್ಯತ್ವ ರೂಢಿಸಿಕೊಳ್ಳುವುದು, ಮಾನವೀಯತೆಯೇ ಬಂಡಾಯದ ಮೂಲ ಉದ್ದೇಶವೆಂದು ತಿಳಿಸಿದರು.

ಯುವ ಬರಹಗಾರರು ದೊಡ್ಡ ಸಾಹಿತಿಗಳನ್ನು ಅನುಕರಣೆ ಮಾಡುತ್ತಾರೆ. ಕೆಲ ಹಿರಿಯ ಸಾಹಿತಿಗಳು ಮದ್ಯಪಾನ, ಧೂಮಪಾನ ಮಾಡುತ್ತಿದ್ದರು. ನಾವೂ ಹಾಗೆ ಮಾಡಿದರೆ ಉತ್ತಮ ಸಾಹಿತ್ಯ ರಚಿಸಬಹುದು ಎಂಬ ಭ್ರಮೆಯಲ್ಲಿರುತ್ತಾರೆ. ದುಶ್ಚಟಗಳಿಗೆ ಬಲಿಯಾಗುವುದರಿಂದ ಬರವಣಿಗೆಗೆ ಶಕ್ತಿ ಬರುವುದಿಲ್ಲ. ಯುವ ಲೇಖಕರು ಹಿರಿಯ ಲೇಖಕರಿಂದ ಅತ್ಯುತ್ತಮ ಗುಣಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು.

ಯುವ ಲೇಖಕರು ಹಿರಿಯ ಲೇಖಕರ ಕೃತಿಗಳನ್ನು ಹೆಚ್ಚೆಚ್ಚು ಅಭ್ಯಸಿಸಬೇಕು. ಇದರಿಂದ ಹೊಸ ಹೊಳವುಗಳಿಗೆ ತೆರೆದುಕೊಳ್ಳಲು ಸಹಕಾರಿಯಾಗುತ್ತದೆ. ಬರಹಗಾರರಿಗೆ ಜ್ಞಾನದ ಹಸಿವಿರಬೇಕು. ಯುವ ಸಾಹಿತಿಗಳಿಗೆ ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ಶಿವರುದ್ರಪ್ಪನವರ ಕೃತಿಗಳ ಪರಿಚಯ ಇರುವುದಿಲ್ಲ. ಯುವ ಲೇಖಕರು ಮುಗ್ಧತೆ, ಹಾಸ್ಯಪ್ರಜ್ಞೆ, ಜಗತ್ತನ್ನು ನೋಡುವ ಆರೋಗ್ಯಕರವಾದ ಚಿಕಿತ್ಸಾ ದೃಷ್ಟಿಕೋನವನ್ನು ಕಳೆದುಕೊಳ್ಳಬಾರದು ಎಂದು ಅವರು ಹೇಳಿದರು.

ಯುವಜನರು ಜನಸಾಮಾನ್ಯರ ನಡೆ ನುಡಿಗಳನ್ನು ಗಮನಿಸಿ ಆಲಿಸಬೇಕು. ಇದರಿಂದ ಭಾಷೆಯ ಬಳಕೆ, ಪ್ರಾದೇಶಿಕ ವ್ಯತ್ಯಾಸ, ಆಧುನಿಕ ಪರಿಕಲ್ಪನೆಗಳ ಹಿಡಿತದ ಪರಿಚಯವಾಗುತ್ತದೆ. ಹಿರಿಯ ಸಾಹಿತಿಗಳ ಬದುಕಿನಲ್ಲಿ ನಡೆದ ಪ್ರಸಂಗಗಳು, ವೈಶಿಷ್ಟಗಳು, ಅನುಭವಿಸಿದ ಆತಂಕ, ತಲ್ಲಣಗಳನ್ನು ಗಮನಿಸಬೇಕು. ಇದರಿಂದ ಬರವಣಿಗೆಗೆ ಹೆಚ್ಚಿನ ಪ್ರೋತ್ಸಾಹ ಬರುತ್ತದೆ ಎಂದು ಅವರು ಅಭಿಪ್ರಾಯಿಸಿದರು.

ಲೇಖಕರು ಗಂಭೀರವಾಗಿರದೆ ಸರಳವಾಗಿರಬೇಕು. ಬದುಕಿನ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಂಡು ಸಂತಸ ಪಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವರ್ತಮಾನದ ಸಂಗತಿಗಳಿಗೆ ಪ್ರತಿಕ್ರಿಯಿಸುವ ಗುಣ ಬೆಳೆಸಿಕೊಳ್ಳಬೇಕು. ಕ್ರೌರ್ಯ, ದಬ್ಬಾಳಿಕೆ, ಹಿಂಸೆಗೆ ಒತ್ತು ನೀಡದೆ ಉತ್ತಮ ಹಾದಿಯಲ್ಲಿ ಬದುಕು ರೂಪಿಸಿಕೊಂಡು ಮಾನವೀತೆಯೆಡೆಗೆ ನಮ್ಮ ನಡೆ ಎಂಬ ತತ್ವದಲ್ಲಿ ಸಾಗಬೇಕು ಎಂದು ಅವರು ಹೇಳಿದರು. ಈ ವೇಳೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮತ್ತಿತರರಿದ್ದರು.

ಇಂದು ನಿಸರ್ಗ ಪ್ರೀತಿಯ ಜತೆಗೆ ಸಮಾಜ ಪ್ರೀತಿ ಬೆಳೆಸಿಕೊಳ್ಳಬೇಕಿದೆ. ನಮ್ಮನ್ನು ಸಲಹುತ್ತಿರುವ ರೈತರು, ಕಾರ್ಮಿಕರು, ಕೂಲಿಕಾರರನ್ನು ಮರೆಯದೆ ಅವರ ಬದುಕನ್ನು ಗಮನಿಸಬೇಕು. ಕೃತಿಗಳಲ್ಲಿ ಅವರ ನೋವನ್ನು ತರಬೇಕು.

-ಸಿದ್ಧಲಿಂಗಯ್ಯ ಹಿರಿಯ ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News