​ಸಿಬಿಐಗೆ ಸಿಗಲಿದೆ ವಿಜಯ್ ಮಲ್ಯ ಸ್ವಿಸ್ ಬ್ಯಾಂಕ್ ಖಾತೆ ವಿವರ

Update: 2019-01-26 03:51 GMT

ಲಂಡನ್, ಜ.26: ದೇಶಭ್ರಷ್ಟ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರ ಸ್ವಿಸ್ ಬ್ಯಾಂಕ್ ಖಾತೆ ಮಾಹಿತಿಯನ್ನು ಸಿಬಿಐಗೆ ನೀಡಲು ಸ್ವಿಡ್ಜರ್‌ಲೆಂಡ್ ಸರ್ಕಾರ ಒಪ್ಪಿಕೊಂಡಿದೆ. ಸಿಬಿಐನ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಅಸ್ತಾನಾ ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿರುವುದರಿಂದ ಈ ಮಾಹಿತಿಯನ್ನು ಸಿಬಿಐಗೆ ನೀಡಬಾರದು ಎಂದು ಸ್ವಿಡ್ಜರ್‌ಲೆಂಡ್‌ನ ಅತ್ಯುನ್ನತ ಕೋರ್ಟ್‌ನಲ್ಲಿ ಮಲ್ಯ ಕಾನೂನು ತಂಡ ವಾದಿಸುವ ಮೂಲಕ ಇದನ್ನು ತಡೆಯುವ ಪ್ರಯತ್ನ ಮಾಡಿತ್ತು.

ಮಲ್ಯ ಅವರ ನಾಲ್ಕು ಬ್ಯಾಂಕ್ ಖಾತೆಗಳನ್ನು ತಡೆಹಿಡಿಯುವಂತೆ ಸಿಬಿಐ, ಸ್ವಿಸ್ ಸರ್ಕಾರಕ್ಕೆ ಮನವಿ ಮಾಡಿತ್ತು. ಸಿಬಿಐ 2018ರ ಆಗಸ್ಟ್ 14ಕ್ಕೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಲು ಜಿನೇವಾದ ಸರ್ಕಾರಿ ಅಭಿಯೋಜಕರು ಒಪ್ಪಿಗೆ ನೀಡಿದರು. ಜತೆಗೆ ಮಲ್ಯಗೆ ಸೇರಿದ ಇತರ ಮೂರು ಬ್ಯಾಂಕ್ ಖಾತೆಗಳ ವಿವರಗಳನ್ನು, ಅವರಿಗೆ ಸಂಬಂಧಿಸಿದ ಐದು ಕಂಪೆನಿಗಳ ವಿವರಗಳನ್ನು ಕೂಡಾ ನೀಡಲು ಒಪ್ಪಿಕೊಂಡಿದ್ದಾರೆ. ಭಾರತಕ್ಕೆ ಸಾಧ್ಯವಿರುವ ಎಲ್ಲ ಕಾನೂನು ನೆರವು ಒದಗಿಸುವ ಪ್ರಯತ್ನವಾಗಿ ಈ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಭಾರತ ಜರುಗಿಸಿರುವ ಕಾನೂನು ಕ್ರಮದಲ್ಲಿ ಸಾಕಷ್ಟು ಲೋಪಗಳಿರುವುದರಿಂದ ಈ ಮಾಹಿತಿಯನ್ನು ಭಾರತಕ್ಕೆ ಒದಗಿಸಬಾರದು ಎಂದು ಮಲ್ಯ ಅವರ ಸ್ವಿಸ್ ಕಾನೂನು ತಂಡ ಕೋರ್ಟ್‌ನಲ್ಲಿ ವಾದ ಮಂಡಿಸಿತ್ತು. ಭ್ರಷ್ಟಾಚಾರ ಆರೋಪ ಹೊತ್ತಿರುವ ಆಸ್ತಾನಾ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿತ್ತು. ಮಾನವ ಹಕ್ಕುಗಳ ಯೂರೋಪಿಯನ್ ಒಪ್ಪಂದದ 6ನೇ ವಿಧಿ ಅನ್ವಯವೂ ಮಾಹಿತಿ ನೀಡಲು ಅವಕಾಶವಿಲ್ಲ ಎಂದು ವಾದಿಸಿತ್ತು.

ಆದರೆ ಈ ವಾದವನ್ನು ತಳ್ಳಿಹಾಕಿದ ಸ್ವಿಸ್ ಸುಪ್ರೀಂಕೋರ್ಟ್, "ವಿದೇಶಗಳ ಕಾನೂನು ಕ್ರಮದ ಲೋಪಗಳ ಬಗ್ಗೆ ಸ್ವಿಡ್ಜರ್‌ಲೆಂಡ್‌ನ ಪ್ರಜೆಗಳಲ್ಲದವರು ಮಾಡುವ ಮನವಿ ಸ್ವೀಕಾರಾರ್ಹವಲ್ಲ. ಆರೋಪಿ ವ್ಯಕ್ತಿ ಬೇರೆ ದೇಶದಲ್ಲಿ ವಾಸವಿದ್ದು, ಅವರ ಗಡೀಪಾರಿಗೆ ಸರ್ಕಾರ ಮನವಿ ಮಾಡಿದೆ. ಅಪರಾಧ ವಿಚಾರಣೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂದು ಪರಿಶೀಲಿಸುವುದು ಆ ದೇಶಕ್ಕೆ ಬಿಟ್ಟ ವಿಚಾರ" ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News