“ದೇಹದಿಂದ ದುರ್ವಾಸನೆ”ಗಾಗಿ ದಂಪತಿ, ಮಗುವನ್ನು ವಿಮಾನದಿಂದ ಕೆಳಗಿಳಿಸಿದರು !

Update: 2019-01-26 11:02 GMT

ವಾಷಿಂಗ್ಟನ್,ಜ.26 : ಡೆಟ್ರಾಯಿಟ್ ಗೆ ತೆರಳಲೆಂದು ಅಮೆರಿಕನ್ ಏರ್ ಲೈನ್ಸ್ ವಿಮಾನವೇರಿದ್ದ ಮಿಚಿಗನ್ ದಂಪತಿ ಮತ್ತವರ 19  ತಿಂಗಳು ವಯಸ್ಸಿನ ಪುತ್ರಿಯ ದೇಹದಿಂದ ದುರ್ವಾಸನೆ ಹೊರಹೊಮ್ಮುತ್ತಿದೆ ಎಂದು ಇತರ ಪ್ರಯಾಣಿಕರು ದೂರಿದ್ದಾರೆಂಬ ಕಾರಣಕ್ಕೆ ಅವರನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ನಡೆದಿದೆ.

ಮಿಯಾಮಿಯಲ್ಲಿ ರಜೆ ಕಳೆದ ನಂತರ ತಾನು ಮತ್ತು ತನ್ನ ಪತ್ನಿ ಜೆನ್ನೀ  ಮನೆಗೆ ಹಿಂದಿರುಗಲು ವಿಮಾನ ಹತ್ತಿದ ನಂತರ ತಮ್ಮನ್ನು ಹೊರಕ್ಕೆ ಕಳುಹಿಸಲಾಯಿತು ಎಂದು ಯೋಸ್ಸಿ ಅಡ್ಲರ್ ಎಂಬ ವ್ಯಕ್ತಿ ಹೇಳಿದ್ದಾನೆ. ದಂಪತಿ 37 ವರ್ಷದವರಾಗಿದ್ದು  ಮಿಚಿಗನ್ ಸೌತ್ ಫೀಲ್ಡ್ ನಲ್ಲಿನ ಅವರ ನಿವಾಸದಲ್ಲಿ ಅವರ ಇತರ ಎಂಟು ಮಕ್ಕಳಿದ್ದಾರೆನ್ನಲಾಗಿದೆ. ಮನೆಯಲ್ಲಿದ್ದ ಮಕ್ಕಳಿಂದ ಏನಾದರೂ ಸಮಸ್ಯೆಯಾಗಿರಬಹುದೇ ಎಂದು ಭಯ ಪಟ್ಟು ವಿಮಾನ ಸಿಬ್ಬಂದಿ ಹೇಳಿದಾಗ ಕೆಳಗಿಳಿದರೂ ನಂತರ ನಮ್ಮ ದೇಹ ದುರ್ವಾಸನೆ ಹೊರಸೂಸುತ್ತಿದೆ ಎಂದು ಹೇಳಿ ಅವಮಾನಿಸಲಾಯಿತು ಎಂದು ಅವರು ಹೇಳಿದ್ದಾರೆ.

ಯಹೂದಿಯಾಗಿರುವ ಅಡ್ಲರ್ ತಮ್ಮನ್ನು ತಮ್ಮ ಧರ್ಮದ ಕಾರಣದಿಂದ ವಿಮಾನದಿಂದ ಕೆಳಕ್ಕಿಳಿಸಲಾಗಿದೆ ಎಂದು ಆರೋಪಿಸಿದ್ದಾನಲ್ಲದೆ ತಾನು ಪ್ರತಿ ದಿನ ಸ್ನಾನ ಮಾಡುತ್ತಿರುವುದಾಗಿಯೂ ಆತ ಹೇಳಿದ್ದಾನೆ.

ಆದರೆ ವಿಮಾನದ ಇತರ ಪ್ರಯಾಣಿಕರು ದೂರಿದ ಕಾರಣ ದಂಪತಿಯನ್ನು ಕೆಳಗಿಳಿಸಲಾಗಿತ್ತು, ನಂತರ ಅವರಿಗೆ ರಾತ್ರಿ ಹೋಟೆಲ್ ವಾಸ್ತವ್ಯಕ್ಕೆ ಹಾಗೂ ಆಹಾರಕ್ಕೆ ವ್ಯವಸ್ಥೆ ಮಾಡಿ ಮರುದಿನ ಇನ್ನೊಂದು ವಿಮಾನದಲ್ಲಿ ಕಳುಹಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದ್ದರೂ  ಆಡ್ಲರ್ ಮಾತ್ರ ಅಮೆರಿಕನ್ ಏರ್ ಲೈನ್ಸ್ ಸಂಸ್ಥೆ ನೀಡಿದ  ವೋಚರುಗಳನ್ನು ಸಂಬಂಧಿತರು ಸವೀಕರಿಸದ ಕಾರಣ ತಾನು ತನ್ನ ಕಿಸೆಯಿಂದಲೇ ಹೋಟೆಲ್ ವಾಸ್ತವ್ಯ ಮತ್ತು  ಆಹಾರಕ್ಕಾಗಿ ಹಣ ನೀಡಿದ್ದಾಗಿ ಹೇಳಿದ್ದಾನೆ. ಆದರೆ ಹೀಗಾಗಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿದ್ದು ಘಟನೆಯ ಬಗ್ಗೆ ಪರಿಶೀಲಿಸಿ ಅಗತ್ಯ ಬಿದ್ದರೆ ಹಣ ವಾಪಸ್ ನೀಡುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News