ಭಾರತದಲ್ಲಿ ರಾಜಪ್ರಭುತ್ವ ಮತ್ತು ದೇವಾಲಯಗಳ ನಡುವಣ ಸಂಬಂಧ

Update: 2019-01-27 10:41 GMT

ಮೊಗಲ್ ಅಧಿಕಾರಿಗಳು ಕೂಚ್ ಬಿಹಾರದ ಮಾದರಿಯಲ್ಲಿ ಮುಸ್ಲಿಮೇತರ ಅರಸರಿಂದ ಗೆದ್ದುಕೊಂಡ ಹೊಸ ಹೊಸ ಸಂಸ್ಥಾನಗಳಲ್ಲೆಲ್ಲ ಜನಸಾಮಾನ್ಯರ ಬೆಂಬಲ ಗಳಿಸುವುದಕ್ಕಾಗಿ ಯಾವೆಲ್ಲ ಸೂಕ್ತ ಕ್ರಮಗಳು ಆವಶ್ಯಕವಾಗಿದ್ದವೊ ಅವೆಲ್ಲವನ್ನು ಕೈಗೊಂಡರು. ಏಕೆಂದರೆ ಇಡೀ ಸಾಮ್ರಾಜ್ಯದ ನಿರ್ಮಾಣಕ್ಕೆ ಬೇಕಿದ್ದ ಐಹಿಕ ಸಂಪತ್ತನ್ನು ಸೃಷ್ಟಿಸುವವರು ಜನಸಾಮಾನ್ಯರಲ್ಲವೇ.


ರಿಚರ್ಡ್ ಡೇವಿಸ್‌ನ ಅಭಿಮತದಲ್ಲಿ ತುರುಕರು ಭಾರತವನ್ನು ಜಯಿಸಿದ ನಂತರದಲ್ಲಿಯೂ ಇದೇ ಮಾದರಿ ಮುಂದುವರಿದಿದೆ. 1514ನೇ ಇಸವಿಯಲ್ಲಿ ವಿಜಯನಗರದ ಕೃಷ್ಣದೇವರಾಯನು ಉದಯಗಿರಿಯನ್ನು ಸೋಲಿಸಿ ಅದನ್ನು ತನ್ನ ವಿಸ್ತರಿಸುತ್ತಿದ್ದ ಸಾಮ್ರಾಜ್ಯಕ್ಕೆ ಸೇರ್ಪಡೆಗೊಳಿಸಿದಾಗ ಅಲ್ಲಿಂದ ಬಾಲಕೃಷ್ಣನ ಮೂರ್ತಿಯೊಂದನ್ನು ಕೊಳ್ಳೆಹೊಡೆದಿದ್ದ. ಇದಾದ ಆರು ವರ್ಷಗಳಲ್ಲಿ ಅವನು ಪಂಢರಪುರದ ಮೇಲೆ ನಿಯಂತ್ರಣ ಸಾಧಿಸಿದ. ಆ ಸಂದರ್ಭದಲ್ಲಿ ಪಂಢರಪುರವನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವ ಮೇಲ್ನೋಟದ ಉದ್ದೇಶದಿಂದ ಅಲ್ಲಿನ ವಿಠ್ಠಲನ ಮೂರ್ತಿಯನ್ನು ಲೂಟಿಗೈದು ವಿಜಯನಗರಕ್ಕೆ ಕೊಂಡೊಯ್ದಂತೆ ತೋರುತ್ತದೆ. (31) ಹನ್ನೊಂದನೆ ಶತಮಾನದ ಅಂತ್ಯದಲ್ಲಿ ಕಾಶ್ಮೀರದ ಅರಸ ಹರ್ಷನು ದೇಗುಲ ದೋಚುವಿಕೆಗೆ ಸಾಂಸ್ಥಿಕ ರೂಪವನ್ನೇ ಕೊಟ್ಟಿದ್ದ. ಹನ್ನೆರಡನೇ ಶತಮಾನದ ಅಂತ್ಯ ಮತ್ತು ಹದಿಮೂರನೇ ಶತಮಾನದ ಆದಿಯಲ್ಲಿ ತುರುಕ ಅರಸರು ಉತ್ತರ ಭಾರತದಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸುತ್ತಿದ್ದ ಕಾಲದಲ್ಲಿ ಪರಮಾರ ರಾಜವಂಶದ ಅರಸರು ಗುಜರಾತ್‌ನ ಜೈನ ಮಂದಿರಗಳಿಗೆ ಲಗ್ಗೆಯಿಟ್ಟು ಅವುಗಳನ್ನು ಕೊಳ್ಳೆಹೊಡೆದಿದ್ದರು. (32) ಹಿಂದೂ ಅರಸರಲ್ಲಿ ರಾಜಕೀಯ ಎದುರಾಳಿಗಳ ರಾಜದೇಗುಲಗಳನ್ನು ಕೊಳ್ಳೆಹೊಡೆಯುವುದಷ್ಟೆ ಅಲ್ಲ ಅವುಗಳನ್ನು ಧ್ವಂಸಗೊಳಿಸುವ ಮಾದರಿಯೂ ಚಾಲ್ತಿಯಲ್ಲಿತ್ತೆಂದು ತಿಳಿದುಬರುತ್ತದೆೆ.

ಉದಾಹರಣೆಗೆ ಹತ್ತನೆ ಶತಮಾನದ ಆದಿಯಲ್ಲಿ ರಾಷ್ಟ್ರಕೂಟರೂ ಪ್ರತಿಹಾರರೂ ಬದ್ಧವೈರಿಗಳಾಗಿದ್ದರು. ರಾಷ್ಟ್ರಕೂಟರ ಅರಸ ಮುಮ್ಮಡಿ ಇಂದ್ರನು ಪ್ರತಿಹಾರ ಅರಸರ ಆಶ್ರಯದಲ್ಲಿದ್ದ (ಯಮುನಾತೀರದ ಕಲ್ಪದಲ್ಲಿನ) ಕಲಪ್ರಿಯ ದೇಗುಲವನ್ನು ನಾಶಪಡಿಸಿದ್ದು ಮಾತ್ರವಲ್ಲ ಮಹದಾನಂದದಿಂದ ಅದನ್ನು ದಾಖಲಿಸಿದ್ದಾನೆೆ ಕೂಡ. (33.) 1460ರ ದಶಕದಲ್ಲಿ ಒರಿಸ್ಸಾದ ಸೂರ್ಯವಂಶಿ ಗಜಪತಿ ರಾಜವಂಶದ ಸಂಸ್ಥಾಪಕ ಕಪಿಲೇಂದ್ರನು ತಮಿಳು ದೇಶಕ್ಕೆ ದಂಡೆತ್ತಿ ಹೋಗಿದ್ದ. ಅಲ್ಲಿ ಅವನು ಯುದ್ಧಗಳಲ್ಲಿ ತೊಡಗಿದ್ದ ಸಮಯದಲ್ಲಿ ಕಾವೇರಿ ಮುಖಜಭೂಮಿಯಲ್ಲಿದ್ದ ಶೈವ ಮತ್ತು ವೈಷ್ಣ್ಣವ ದೇವಾಲಯಗಳೆರಡನ್ನೂ ನಾಶಪಡಿಸಿದ್ದ. (31.2.) ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಸ್ಲಿಂ ತುರುಕರು ಭಾರತಕ್ಕೆ ಕಾಲಿಡುವುದಕ್ಕೂ ಸಾಕಷ್ಟು ಮೊದಲೆ ಇಲ್ಲಿ ಮಂದಿರಗಳೆ ರಾಜಾಧಿಕಾರವನ್ನು ಪ್ರಶ್ನಿಸಲು ರೂಢಿಯ ಸ್ಥಳಗಳಾಗಿದ್ದವು. ಆದಿ ಮಧ್ಯಯುಗದಲ್ಲಿ ಭಾರತಕ್ಕೆ ದಂಡೆತ್ತಿ ಬಂದ ತುರುಕರು ಈ ದೇಶದಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸಲೆತ್ನಿಸಿದಾಗ ಇಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ ಸ್ಥಾಪಿತ ಮಾದರಿಗಳನ್ನು ಅನುಸರಿಸಿದರಲ್ಲದೆ ಅದನ್ನೇ ಮುಂದುವರಿಸಿದರು ಕೂಡ......... ಯಾವತ್ತೂ ಸೈನ್ಯಾಧಿಕಾರಿಗಳು ಅಥವಾ ಆಡಳಿತಾಧಿಕಾರಿಗಳೆ ಹೆಚ್ಚುಕಮ್ಮಿ ಎಲ್ಲಾ ಪಾವಿತ್ರ ನಾಶ ಕೃತ್ಯಗಳನ್ನು ನಡೆಸುತ್ತಿದ್ದರು. ಅರ್ಥಾತ್ ನಮ್ಮ ತಿಳಿವಳಿಕೆಯಲ್ಲಿರುವ ಇಂತಹ ಕೃತ್ಯಗಳು ಪ್ರಭುತ್ವದ ವತಿಯಿಂದ ನಡೆಸಲ್ಪಟ್ಟವುಗಳು. ಎರಡನೆಯದಾಗಿ, ದತ್ತಾಂಶಗಳಲ್ಲಿನ ಘಟನಾವಳಿ ಮತ್ತು ಭೌಗೋಳಿಕ ವಿವರಗಳು ಸೂಚಿಸುವಂತೆ ಪಾವಿತ್ರನಾಶದ ಕೃತ್ಯಗಳು ಚಲಿಸುತ್ತಿರುವ ಸೈನ್ಯದ ಮುಂಚೂಣಿಗೆ ಸಮೀಪವಿರುವ ಜಾಗಗಳಲ್ಲಿ ಸಂಭವಿಸಿವೆ.

ದಖ್ಖಣದ ಇಂಡೊ-ಮುಸ್ಲಿಂ ರಾಜ್ಯಗಳು ಮುಸ್ಲಿಮೇತರ ರಾಜ್ಯಗಳನ್ನು ವಶಪಡಿಸಿಕೊಂಡು ವಿಸ್ತರಿಸುತ್ತ ಸಾಗಿದರೆ ಉತ್ತರಭಾರತದ ಮೊಗಲರು ಬಾಬರ್, ಹುಮಾಯೂನ್ ಮತ್ತು ಅಕ್ಬರ್‌ರ ಆಡಳಿತ ಕಾಲದಲ್ಲಿ (ಕ್ರಿ.ಶ.1526ರಿಂದ 1605ರ ತನಕ) ಪ್ರಧಾನವಾಗಿ ಮುಸಲ್ಮಾನ ಅಫ್ಘಾನರನ್ನು ಸೋಲಿಸುವ ಮೂಲಕ ಸಾಮ್ರಾಜ್ಯ ವಿಸ್ತರಣೆ ಮಾಡಿದರು. ಅಫ್ಘಾನರು ಯಾವತ್ತೂ ತಮ್ಮ ಸಾರ್ವಭೌಮತ್ವವನ್ನು ರಾಜದೇಗುಲಗಳಲ್ಲಿದ್ದ ಹಿಂದೂ ದೇವತೆಗಳೊಂದಿಗೆ ಹಂಚಿಕೊಂಡಿರಲಿಲ್ಲ. ಆದಿಯ ಮೊಗಲರು ಅಯೋಧ್ಯೆಯಲ್ಲಾಗಲಿ ಅಥವಾ ಇತರೆಡೆಗಳಲ್ಲಾಗಲಿ ದೇಗುಲ ಅಪವಿತ್ರೀಕರಣ ಕೃತ್ಯಗಳನ್ನು ನಡೆಸಿರುವ ಬಗ್ಗೆ ಸುದೃಢ ಪುರಾವೆಗಳು ಲಭ್ಯವಿರದುದಕ್ಕೆ ಇದೇ ಕಾರಣವಿರಬಹುದು. ಬಾಬರ್‌ನ ಅಧಿಕಾರಿ ಮೀರ್ ಬಾಖಿಯು ಅಯೋಧ್ಯೆಯ ರಾಮ ಮಂದಿರವನ್ನು ಕೆಡವಿದ ಬಳಿಕ ಸಾಮ್ರಾಟನ ಅನುಮತಿ ಪಡೆದುಕೊಂಡು ಅದೇ ಸ್ಥಳದಲ್ಲಿ ಕುಖ್ಯಾತ ಬಾಬರಿ ಮಸೀದಿಯನ್ನು ಕಟ್ಟಿಸಿದನೆಂಬ ಕಲ್ಪನೆಯನ್ನು ಎಸ್.ಕೆ.ಬ್ಯಾನರ್ಜಿ 1936ರಲ್ಲಿ ವಿಸ್ತಾರಗೊಳಿಸಿದರು. ಆದಾಗ್ಯೂ ಅವರು ಅಲ್ಲಿ ಯಾವತ್ತಾದರೂ ಒಂದು ಮಂದಿರವಿತ್ತು ಎಂಬುದಕ್ಕಾಗಲೀ ಅದನ್ನು ಮೀರ್ ಬಾಖಿ ಧ್ವಂಸಗೊಳಿಸಿದ ಎಂಬುದಕ್ಕಾಗಲೀ ಯಾವುದೇ ಪುರಾವೆಯನ್ನು ಒದಗಿಸಲಿಲ್ಲ.

ಮಸೀದಿಯ ಶಾಸನದಲ್ಲಿ ಬರೆದಿರುವುದಿಷ್ಟೆ: ಬಾಬರನು ಮಸೀದಿ ನಿರ್ಮಾಣಕ್ಕೆ ಆದೇಶಿಸಿದ; ಮಸೀದಿಯನ್ನು ಮೀರ್ ಬಾಖಿ ನಿರ್ಮಿಸಿದ; ಇದು ‘ಸ್ವರ್ಗವಾಸಿಗಳು ಬಂದಿಳಿಯುವ ಸ್ಥಳ’. ಈ ಆಲಂಕಾರಿಕ ವಾಕ್ಯಗಳು ರಾಮನ ಕುರಿತಾದುದೆಂದು ವ್ಯಾಖ್ಯಾನಿಸಲು ಬರುವುದಿಲ್ಲ. ಏಕೆಂದರೆ ಮೊದಲನೆಯದಾಗಿ, ಪರ್ಷಿಯನ್ ಭಾಷೆಯಲ್ಲಿ ಇಂತಹ ಆಲಂಕಾರಿಕ ವಾಕ್ಯಗಳು ಸಾಮಾನ್ಯ. ಎರಡನೆಯದಾಗಿ, ಶಾಸನದಲ್ಲಿ ಮಸೀದಿಯ ವರ್ಣನೆಯಿದೆ ಹೊರತು ಆ ಸ್ಥಳ ಅಥವಾ ಹಿಂದಿನ ಯಾವುದೇ ನಿರ್ಮಾಣದ ವರ್ಣನೆ ಇಲ್ಲ (37.) ಮೊಗಲರ ಸೇನೆಗಳು ಹಿಂದಿನ ದೆಹಲಿ ಸುಲ್ತಾನರ ಸಾಮ್ರಾಜ್ಯದ ಗಡಿಗಳನ್ನು ದಾಟಿ ಹಿಂದೂ ಅರಸರ ರಾಜ್ಯಗಳನ್ನು ಗೆಲ್ಲಲೆತ್ನಿಸಿದ ಸಂದರ್ಭಗಳಲ್ಲೆಲ್ಲಾ ಮಂದಿರ ಅಪವಿತ್ರೀಕರಣ ಕೃತ್ಯಗಳು ನಡೆದಿವೆ. ಅಂದು ಮುಸ್ಲಿಂ ಸೇನಾಧಿಪತಿಗಳು, ರಾಜಪ್ರತಿನಿಧಿಗಳು ಅಥವಾ ಸುಲ್ತಾನರುಗಳು ರಾಜದೇಗುಲಗಳ ಅಪವಿತ್ರೀಕರಣವನ್ನು ಪರಾಜಿತ ಹಿಂದೂ ರಾಜನೊಬ್ಬನಿಗೆ ತನ್ನ ಹಿಂದಿನ ರಾಜ್ಯದ ಮೇಲಿದ್ದ ಅಧಿಕಾರವನ್ನು ಆತನಿಂದ ಬೇರ್ಪಡಿಸುವ ಒಂದು ಸಹಜ ಸಾಧನವಾಗಿ ಪರಿಗಣಿಸುತ್ತಿದ್ದರು. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ರಾಜದೇಗುಲಗಳ ಅಪವಿತ್ರೀಕರಣವನ್ನು ರಾಜ್ಯದ ಸಂರಕ್ಷಕನೆೆಂದು ಸಾರ್ವಜನಿಕರು ಪರಿಭಾವಿಸುತ್ತಿದ್ದ ರಾಷ್ಟ್ರದೇವತೆಯ ಪುತ್ಥಳಿಯಿಂದ ರಾಜನನ್ನು ಬೇರ್ಪಡಿಸುವ ಸಹಜ ಸಾಧನವಾಗಿ ಪರಿಗಣಿಸುತ್ತಿದ್ದರು.

ಸಮಕಾಲೀನ ಇತಿಹಾಸಕಾರರ ಬರಹಗಳು ಮತ್ತು ವಿಜೇತರು ಬಿಟ್ಟುಹೋಗಿರುವ ಶಾಸನಗಳು ಈ ಕುರಿತು ಯಾವುದೇ ಅನುಮಾನಕ್ಕೆ ಆಸ್ಪದ ನೀಡುವುದಿಲ್ಲ. ಶತ್ರುವಿಗೆ ತನ್ನ ಅಧಿಕಾರವನ್ನು ಸ್ಥಾಪಿಸಲು ಆವಶ್ಯಕವೆಂದು ಪರಿಗಣಿಸಲಾದ ದೇವಸ್ಥಾನಗಳನ್ನು ನಾಶಪಡಿಸುವುದು ಅಂದು ರೂಢಿಯಲ್ಲಿದ್ದಂತಹ ಅತ್ಯಂತ ಸಾಮಾನ್ಯ ವಿಧಾನವಾಗಿತ್ತು. ಕೆಲವೊಮ್ಮೆ ಮಂದಿರಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಯಿತು. ಆ ಮೂಲಕ ಹಿಂದಿನ ಸಾರ್ವಭೌಮತ್ವವನ್ನು ಕಿತ್ತುಹಾಕುವ ಮತ್ತು ಹೊಸ ಸಾರ್ವಭೌಮತ್ವವನ್ನು ಸ್ಥಾಪಿಸುವ ಪ್ರಕ್ರಿಯೆಗಳನ್ನು ಇನ್ನಷ್ಟು ಸ್ಪಷ್ಟವಾಗಿ ಬೆಸೆಯಲಾಯಿತು. ತುರುಕರ ಆಗಮನಕ್ಕೂ ಮುನ್ನ ಭಾರತದಲ್ಲಿ ಚಾಲ್ತಿಯಲ್ಲಿದ್ದಂತಹ ಅಪವಿತ್ರೀಕರಣದ ಒಂದು ಮಾದರಿ - ಪರಾಜಿತ ಅರಸನ ರಾಷ್ಟ್ರದೇವತೆಯ ಮೂರ್ತಿಯನ್ನು ಅಪಹರಿಸಿ ಅದನ್ನು ಯುದ್ಧದ ಪಾರಿತೋಷಕವಾಗಿ ವಿಜೇತನ ರಾಜಧಾನಿಗೆ ಕೊಂಡೊಯ್ಯುವ ಮಾದರಿ - ತುರುಕರ ಆಗಮನದ ನಂತರವೂ ಅವಿರತವಾಗಿ ಮುಂದುವರಿದಿತ್ತು. ಉದಾಹರಣೆಗೆ, 1299ರ ಫೆಬ್ರವರಿಯಲ್ಲಿ ಗುಜರಾತ್‌ನ ಸುಪ್ರಸಿದ್ಧ ಸೋಮನಾಥ ದೇವಾಲಯವನ್ನು ಸೂರೆಗೈದ ಉಲುಘ್ ಖಾನ್ ಬಳಿಕ ಅಲ್ಲಿನ ಅತ್ಯಂತ ದೊಡ್ಡ ವಿಗ್ರಹವನ್ನು ಸುಲ್ತಾನ ಅಲಾ ಅಲ್-ದೀನ್ ಖಲಜಿಯ ದೆಹಲಿ ಆಸ್ಥಾನಕ್ಕೆ ಕಳುಹಿಸಿದ್ದ (ಕ್ರ.ಸಂ. 16; ನಕಾಶೆ 1). 1518ನೇ ಇಸವಿಯಲ್ಲಿ ದೆಹಲಿಯ ಸುಲ್ತಾನ ಇಬ್ರಾಹೀಂ ಲೋಡಿಗೆ ಗ್ವಾಲಿಯರ್‌ನ ರಜಪೂತ ಸಾಮಂತನೊಬ್ಬನ ರಾಜನಿಷ್ಠೆಯ ಬಗ್ಗೆ ಸಂದೇಹ ಹುಟ್ಟಿತು. ಆಗ ಆತ ಗ್ವಾಲಿಯರ್‌ನ ಪ್ರಖ್ಯಾತ ಖಿಲ್ಲೆಗೆ ದಾಳಿ ಮಾಡಿ ಸಾಮಂತನ ಶಿವ ದೇವಾಲಯದ ಪಕ್ಕದಲ್ಲಿದ್ದ ಹಿತ್ತಾಳೆಯ ನಂದಿಯೊಂದನ್ನು ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿ ದೆಹಲಿಯ ಬಗ್ದಾದ್ ಗೇಟ್ ಎಂಬಲ್ಲಿ ಸ್ಥಾಪಿಸಿದ್ದ (ಕ್ರ.ಸಂ. 46; ನಕಾಶೆ 2).

ಇದೇ ರೀತಿಯಾಗಿ 1579ರಲ್ಲಿ ಗೊಲ್ಕೊಂಡದ ಸೈನ್ಯ ಮುರಹರಿ ರಾವ್ ನೇತೃತ್ವದಲ್ಲಿ ಕೃಷ್ಣಾ ನದಿಯ ದಕ್ಷಿಣದ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸಿತ್ತು. ಮುರಹರಿ ರಾವ್ ಆ ಇಡೀ ಕ್ಷೇತ್ರವನ್ನು ಕುತುಬ್ ಶಾಹೀ ಸಾಮ್ರಾಜ್ಯಕ್ಕೆ ಸೇರಿಸಿದನಲ್ಲದೆ ಅಹೋಬಿಲಂ ದೇವಾಲಯವನ್ನೂ ನೆಲಸಮಗೊಳಿಸಿದ. ಬಳಿಕ ದೇವಾಲಯದ ವಜ್ರಖಚಿತ ಬಿಂಬವನ್ನು ಗೊಲ್ಕೊಂಡಕ್ಕೆ ಕೊಂಡೊಯ್ದು ಅದನ್ನು ಯುದ್ಧದ ಪಾರಿತೋಷಕವಾಗಿ ಸುಲ್ತಾನನಿಗೆ ಸಮರ್ಪಿಸಿದ (ಕ್ರ.ಸಂ. 51). ಆ ಕಾಲಘಟ್ಟದಲ್ಲಿ ಅಹೋಬಿಲಂ ಮಂದಿರದ ಮಹತ್ವ ಆ ಸ್ಥಳಕ್ಕಷ್ಟೆ ಸೀಮಿತವಾಗಿತ್ತು. ಆದರೆ ಒಂದು ಕಾಲದಲ್ಲಿ ಅದು ಹಿಂದಿನ ಸಾರ್ವಭೌಮತ್ವಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದ ಮಂದಿರವಾಗಿತ್ತು. ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಖ್ಯಾತ ಅರಸನಾಗಿದ್ದ ಕೃಷ್ಣದೇವರಾಯ ಅಹೋಬಿಲಂ ಮಂದಿರದ ಪೋಷಕನಾಗಿದ್ದ ಮಾತ್ರವಲ್ಲ ಅಲ್ಲಿಗೆ ಆಗಾಗ ಭೇಟಿ ನೀಡುತ್ತಲೂ ಇದ್ದ. ಹಾಗಾಗಿ ಈ ದೇವಸ್ಥಾನಕ್ಕಿದ್ದ ರಾಜಕೀಯ ಮಹತ್ವಕ್ಕೋಸ್ಕರ ಅದನ್ನು ಅಪವಿತ್ರಗೊಳಿಸುವ ಆವಶ್ಯಕತೆಯನ್ನು ಸ್ವತಃ ಮರಾಠಿ ಬ್ರಾಹ್ಮಣನಾಗಿದ್ದ ಮುರಹರಿ ರಾವ್ ಬಹಳ ಚೆನ್ನಾಗಿ ಅರಿತಿದ್ದಿರಬೇಕು (39.)

ಈ ಪಾವಿತ್ರನಾಶ ಕೃತ್ಯಗಳ ಸ್ವರೂಪ ಯಾವುದೇ ಇದ್ದರೂ ಅವೆಂದೂ ಜನರನ್ನು ಗುರಿಯಾಗಿಸಿರಲಿಲ್ಲ. ಅವುಗಳ ಗುರಿಯಾಗಿದ್ದುದು ಶತ್ರುರಾಜ ಹಾಗೂ ಆತನ ರಾಷ್ಟ್ರದೇವತೆಯ ಪ್ರತೀಕವಾಗಿದ್ದ ವಿಗ್ರಹ. 1661ನೆ ಇಸವಿಯಲ್ಲಿ ಕೂಚ್ ಬಿಹಾರ್‌ಗೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಿದ್ದ ಮೊಗಲ್ ಸೈನ್ಯದ ಅಧಿಕಾರಿಗಳಿಗೆ ಎರಡು ಪ್ರಮುಖ ಉದ್ದೇಶಗಳಿದ್ದವೆಂದು ಸಮಕಾಲೀನ ಬರಹವೊಂದು ತಿಳಿಸುತ್ತದೆ. ಒಂದು, ಪರಾಭವಗೊಂಡ ರಾಜ ಭೀಮ ನಾರಾಯಣನ ರಾಷ್ಟ್ರದೇವತೆಯ ಮೂರ್ತಿಯನ್ನು ಧ್ವಂಸಗೊಳಿಸುವುದು. ಎರಡು, ಮೊಗಲ್ ಸೈನಿಕರು ಸ್ಥಳೀಯ ಜನರನ್ನು ಲೂಟಿ ಮಾಡದಂತೆ ಅಥವಾ ಅವರಿಗೆ ಬೇರಾವುದೇ ರೀತಿಯ ಹಾನಿ ಎಸಗದಂತೆ ನೋಡಿಕೊಳ್ಳುವುದು. ಈ ನಿಟ್ಟಿನಲ್ಲಿ ಮೊಗಲ್ ಆಡಳಿತದಲ್ಲಿದ್ದ ಬಂಗಾಳದ ಮುಖ್ಯ ನ್ಯಾಯಾಧೀಶ ಸಯ್ಯದ್ ಮುಹಮ್ಮದ್ ಸಾದಿಕ್‌ಗೆ ನೀಡಲಾದ ಆದೇಶ ಹೀಗಿದೆ:

ಜನರ ನಗದು ಮತ್ತು ಆಸ್ತಿಪಾಸ್ತಿಗಳನ್ನು ಯಾರೂ ಮುಟ್ಟತಕ್ಕದ್ದಲ್ಲವೆಂಬ ನಿಷೇಧಾಜ್ಞೆಯನ್ನು ಹೊರಡಿಸಬೇಕು; ಎಲ್ಲಾ ಕಡೆಗಳಿಗೂ ಖುದ್ದಾಗಿ ಭೇಟಿ ನೀಡಿ ಅಲ್ಲಿ ಸುವ್ಯವಸ್ಥೆ ಸ್ಥಾಪಿಸಬೇಕು; ಭೀಮ ನಾರಾಯಣನ ಖಜಾನೆಯನ್ನು ಮುಟ್ಟುಗೋಲು ಹಾಕಿ, ಮೂರ್ತಿಗಳನ್ನು ಒಡೆದು ಇಸ್ಲಾಮಿನ ಕಾಯ್ದೆಗಳನ್ನು ಜಾರಿಗೊಳಿಸಬೇಕು ಎಂದು ಸಯ್ಯದ್ ಮುಹಮ್ಮದ್ ಸಾದಿಕ್‌ಗೆ ಆದೇಶಿಸಲಾಯಿತು. ಸಯ್ಯದ್ ಸಾದಿಕ್ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದಾಗ ಯಾರಿಗೂ ಕಾನೂನಿನ ಉಲ್ಲಂಘನೆ ಮಾಡುವ ಅಥವಾ ಜನರ ಆಸ್ತಿಪಾಸ್ತಿಗಳನ್ನು ಲೂಟಿಮಾಡುವ ಧೈರ್ಯ ಬರಲಿಲ್ಲ. ಆಜ್ಞೆಯನ್ನು ಉಲ್ಲಂಘಿಸಿದವರು ಕೈ, ಕಿವಿ ಅಥವಾ ಮೂಗು ಕೊಯ್ಯುವ ಶಿಕ್ಷೆಗೊಳಗಾಗುತ್ತಿದ್ದರು. ಸಯ್ಯದ್ ಸಾದಿಕ್ ಪ್ರಜೆಗಳಿಗೆ ಹಾಗೂ ನಿರ್ಗತಿಕರಿಗೆ ಜೀವ ಭದ್ರತೆ ಮತ್ತು ಆಸ್ತಿ ಭದ್ರತೆಗಳನ್ನು ಒದಗಿಸುವ ಕಾರ್ಯದಲ್ಲಿ ನಿರತನಾದನು (41)

‘‘ಮೊಗಲ್ ಅಧಿಕಾರಿಗಳು ಕೂಚ್ ಬಿಹಾರದ ಮಾದರಿಯಲ್ಲಿ ಮುಸ್ಲಿಮೇತರ ಅರಸರಿಂದ ಗೆದ್ದುಕೊಂಡ ಹೊಸ ಹೊಸ ಸಂಸ್ಥಾನಗಳಲ್ಲೆಲ್ಲ ಜನಸಾಮಾನ್ಯರ ಬೆಂಬಲ ಗಳಿಸುವುದಕ್ಕಾಗಿ ಯಾವೆಲ್ಲ ಸೂಕ್ತ ಕ್ರಮಗಳು ಆವಶ್ಯಕವಾಗಿದ್ದವೊ ಅವೆಲ್ಲವನ್ನು ಕೈಗೊಂಡರು. ಏಕೆಂದರೆ ಇಡೀ ಸಾಮ್ರಾಜ್ಯದ ನಿರ್ಮಾಣಕ್ಕೆ ಬೇಕಿದ್ದ ಐಹಿಕ ಸಂಪತ್ತನ್ನು ಸೃಷ್ಟಿಸುವವರು ಜನಸಾಮಾನ್ಯರಲ್ಲವೇ.’’

ಭಾರತದ ಮುಸ್ಲಿಂ ಸಾಮ್ರಾಜ್ಯಗಳು ಸುಮಾರು 60,000 ದೇವಾಲಯಗಳನ್ನು ಅಪವಿತ್ರೀಕರಿಸಿವೆೆ/ನಾಶಗೊಳಿಸಿವೆೆ ಎನ್ನುವುದು ಕೆಲವು ಹಿಂದೂ ರಾಷ್ಟ್ರೀಯವಾದಿಗಳ ವಾದ. ಆದರೆ ಇದೊಂದು ಉತ್ಪ್ರೇಕ್ಷಿತ ಸಂಖ್ಯೆ ಎನ್ನುತ್ತಾರೆ ಪ್ರೊ. ಈಟನ್. ಅವರ ಪ್ರಕಾರ ಸುಮಾರು ಐದು ಶತಮಾನಗಳಿಗೂ (1192-1729) ಅಧಿಕ ಕಾಲಾವಧಿಯ ಶಾಸನ ಹಾಗೂ ಸಾಹಿತ್ಯಿಕ ಪುರಾವೆಗಳ ನಿಷ್ಕೃಷ್ಠ ಆಧಾರದಲ್ಲಿ ನೋಡಿದಾಗ ಒಟ್ಟಾರೆಯಾಗಿ ಸುಮಾರು 80 ಮಂದಿರಗಳನ್ನಷ್ಟೆ ಅಪವಿತ್ರೀಕರಿಸಲಾಗಿದೆೆ/ನಾಶಗೊಳಿಸಲಾಗಿದೆ. ಕೊನೆಯದಾಗಿ, ಮೈಸೂರಿನಲ್ಲಿ ಚಿಮೂರವರು ಜನರ ಮುಂದಿರಿಸಿದ ‘ಧರ್ಮದ ಉಳಿವಿಗಾಗಿ ಹೋರಾಟ ನಡೆಸುವ’ ಧರ್ಮಹಿಂಸೆ ‘ಶ್ರೇಷ್ಠವಾದದ್ದು’ ಎಂಬ ಆಘಾತಕಾರಿ ಪ್ರತಿಪಾದನೆ ಮಾನ್ಯರು ಹೆಸರಿಸದ ಒಂದು ಧರ್ಮಕ್ಕೆ ಸೀಮಿತವೋ ಅಥವಾ ಇತರೆಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೋ ಗೊತ್ತಿಲ್ಲ. ಅದೇನಿದ್ದರೂ ಇದೊಂದು ಅತ್ಯಂತ ಅಪಾಯಕಾರಿ ಹೇಳಿಕೆ ಎಂಬುದರಲ್ಲಿ ಅನುಮಾನವೇ ಇಲ್ಲ. ಈಹೊತ್ತಿನ ಭಾರತದಲ್ಲಿ ಇದೇ ಮಾತುಗಳನ್ನು ಅಲ್ಪಸಂಖ್ಯಾತ ಧರ್ಮೀಯರೊಬ್ಬರು ಆಡಿದ್ದರೆ ಪರಿಣಾಮ ಏನಾಗುತ್ತಿತ್ತೆಂದು ನೀವೇ ಊಹಿಸಿ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News