95ರ ವಯಸ್ಸಲ್ಲಿ ಪದ್ಮಪ್ರಶಸ್ತಿ ಪುರಸ್ಕೃತ ಎಂಡಿಎಚ್ ಮಸಾಲೆ ಮಾಲಕ !

Update: 2019-01-27 04:18 GMT

ಹೊಸದಿಲ್ಲಿ, ಜ. 27: ಟಿವಿ ಜಾಹೀರಾತುಗಳಲ್ಲಿ ದಾದಜಿ ನವದಂಪತಿಗಳನ್ನು ಹರಸುವ, ಪುಟ್ಟ ಮಕ್ಕಳನ್ನು ಮುದ್ದಿಸುವ ಹಾಗೂ ಜಿಂಗಲ್ "ಅಸ್ಲಿ ಮಸಾಲಾ ಸಚ್ ಸಚ್" ಹಾಡಿಗೆ ಕಾಲು ಕುಣಿಸುವ ಈ ಚಿರಯುವಕನ ನೆನಪಿದೆಯೇ ? ಧರ್ಮಪಾಲ್ ಗುಲಾಟಿ (95) ಬಹುಶಃ ವಿಶ್ವದ ಅತಿಹಿರಿಯ ಜಾಹೀರಾತು ತಾರೆ.

ಇವರ ಖ್ಯಾತಿ ಇಷ್ಟು ಮಾತ್ರವಲ್ಲ; 2000 ಕೋಟಿ ರೂ. ಮೌಲ್ಯದ ಮಹಾಶಯ ದಿ ಹತ್ತಿ (ಎಂಡಿಎಚ್) ಉದ್ಯಮ ಸಮೂಹದ ಮಾಲಕರಾಗಿರುವ ಇವರು ವ್ಯಾಪಾರ, ಉದ್ಯಮ ಕ್ಷೇತ್ರದ ಗಣನೀಯ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಕೆಂಪು ರುಮಾಲು ಮತ್ತು ಬಿಳಿ ಮೀಸೆಯಿಂದ ಕಂಗೊಳಿಸುವ "ಮಹಾಶಯ್‌ಜೀ" ಫೋನ್ ಪದ್ಮಪ್ರಶಸ್ತಿ ಪ್ರಕಟವಾದಾಗಿನಿಂದ ರಿಂಗಣಿಸುತ್ತಲೇ ಇದೆ. ಖುಷಿಯಿಂದ ಅವರು ಎಲ್ಲ ಅಭಿನಂದನೆ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. "ಮೈ ಔರ್ ಕೋಯಿ ನಶಾ ನಹಿ ಕರ್ತಾ/ ಮುಜೆ ಪ್ಯಾರ್ ಕ ನಶಾ ಹೆ" (ನನಗೆ ಪ್ರೀತಿಸುವುದು ಬಿಟ್ಟರೆ ಯಾವ ಚಾಳಿಯೂ ಇಲ್ಲ). ಮಕ್ಕಳು ಹಾಗೂ ಯುವಕರು ನನ್ನನ್ನು ಭೇಟಿ ಮಾಡಿ ಸೆಲ್ಫಿ ತೆಗೆಸಿಕೊಳ್ಳುವುದನ್ನು ಇಷ್ಟಪಡುತ್ತೇನೆ ಎಂದು ಅವರು ಹೇಳುತ್ತಾರೆ.

ಐದನೇ ತರಗತಿಯಲ್ಲಿ ಶಾಲೆಗೆ ಗುಡ್‌ಬೈ ಹೇಳಿದ ಗುಲಾಟಿ, ಎಫ್‌ಎಂಜಿಸಿ ವಲಯದಲ್ಲಿ ಗರಿಷ್ಠ ವೇತನ ಪಡೆಯುವ ಸಿಇಒ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. 2018ರಲ್ಲಿ ಇವರ ವೇತನ 25 ಕೋಟಿ. ಈಗ ಪಾಕಿಸ್ತಾನದಲ್ಲಿರುವ ಸಿಯಾಲ್‌ಕೋಟ್‌ನಲ್ಲಿ 1923ರ ಮಾರ್ಚ್ 27ರಂದು ಜನಿಸಿದ ಗುಲಾಟಿಯವರ ಯಶೋಗಾಥೆ ರೋಚಕ.

ದೇಶ ವಿಭಜನೆ ಬಳಿಕ ಗುಲಾಟಿ ಹಾಗೂ ಅವರ ಕುಟುಂಬ ಭಾರತಕ್ಕೆ ಮರಳಿದಾಗ ಕೈಯಲ್ಲಿದ್ದುದು ಕೇವಲ 1500 ರೂಪಾಯಿ. ಟಾಂಗೆವಾಲಾ (ಕುದುರೆಗಾಡಿ ಓಡಿಸುವಾತ) ಆಗಿ ಕೆಲಸ ಆರಂಭಿಸಿದರು. ಬಳಿಕ ಕರೋಲ್‌ಭಾಗ್‌ನ ಅಜ್ಮಲ್ ಖಾನ್ ರಸ್ತೆಯಲ್ಲಿ ಮಸಾಲೆ ಪದಾರ್ಥಗಳ ಮಳಿಗೆ ಆರಂಭಿಸಲು ಹಣ ಕ್ರೋಢೀಕರಿಸಿದರು.

ನಿಧಾನವಾಗಿ ವಹಿವಾಟು ಕುದುರಿತು. ಇದೀಗ ಅವರು ಭಾರತ ಹಾಗೂ ದುಬೈನಲ್ಲಿ 18 ಫ್ಯಾಕ್ಟರಿಗಳ ಒಡೆಯ. ಎಂಡಿಎಚ್ ಮಸಾಲೆ ವಿಶ್ವಾದ್ಯಂತ ಜನಪ್ರಿಯ. 62 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಉತ್ತರ ಭಾರತದಲ್ಲಿ ಶೇಕಡ 80ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಎರಡು ತಿಂಗಳಲ್ಲಿ 96ನೇ ವರ್ಷಕ್ಕೆ ಕಾಲಿಡುವ ಅವರು ಇಂದಿಗೂ ಕನಿಷ್ಠ ದಿನಕ್ಕೆ ಒಂದು ಫ್ಯಾಕ್ಟರಿಗೆ ಭೇಟಿ ನೀಡುತ್ತಾರೆ. ಅವರು ಕಟ್ಟಿದ ಮಸಾಲೆ ಸಾಮ್ರಾಜ್ಯವನ್ನು ಇದೀಗ ಆರು ಮಂದಿ ಪುತ್ರಿಯರು ಹಾಗೂ ಓರ್ವ ಪುತ್ರ ನಿರ್ವಹಿಸಲು ನೆರವಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News