ದೇಶದ ಅತ್ಯಂತ ವೇಗದ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ನಾಮಕರಣ

Update: 2019-01-27 14:52 GMT

ಹೊಸದಿಲ್ಲಿ,ಜ.27: ಭಾರತದ ಅತ್ಯಂತ ವೇಗದ ರೈಲು ಟ್ರೇನ್ 18ಕ್ಕೆ ಗಣರಾಜ್ಯೋತ್ಸವದ ಕೊಡುಗೆಯಾಗಿ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ನಾಮಕರಣ ಮಾಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ರವಿವಾರ ಇಲ್ಲಿ ತಿಳಿಸಿದರು.

ಈ ರೈಲು ದಿಲ್ಲಿ-ವಾರಣಾಸಿ ನಡುವೆ ಗಂಟೆಗೆ 160 ಕಿ.ಮೀ.ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೂತನ ರೈಲಿಗೆ ಚಾಲನೆ ನೀಡುವ ನಿರೀಕ್ಷೆಯಿದೆ.

ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯು 97 ಕೋ.ರೂ.ಗಳ ವೆಚ್ಚದಲ್ಲಿ 18 ತಿಂಗಳುಗಳ ಅವಧಿಯಲ್ಲಿ ನಿರ್ಮಿಸಿರುವ 16 ಬೋಗಿಗಳ ಈ ರೈಲನ್ನು 30 ವರ್ಷಗಳಷ್ಟು ಹಳೆಯದಾದ ಶತಾಬ್ದಿ ಎಕ್ಸ್‌ಪ್ರೆಸ್‌ನ ಉತ್ತರಾಧಿಕಾರಿಯೆಂದು ಪರಿಗಣಿಸಲಾಗಿದೆ. ಇದು ದೇಶದ ಮೊದಲ ಇಂಜಿನ್‌ ರಹಿತ ರೈಲು ಕೂಡ ಆಗಿದೆ.

ನೂತನ ರೈಲಿನ ವೈಶಿಷ್ಟಗಳನ್ನು ವಿವರಿಸಿದ ಗೋಯಲ್,ಮೇಕ್ ಇನ್ ಇಂಡಿಯಾ ಅಭಿಯಾನದಡಿ ವಿಶ್ವದರ್ಜೆಯ ರೈಲುಗಳ ನಿರ್ಮಾಣ ಸಾಧ್ಯ ಎನ್ನುವುದಕ್ಕೆ ಇದು ನಿದರ್ಶನವಾಗಿದೆ ಎಂದರು.

ಸಂಪೂರ್ಣ ವಾತಾನುಕೂಲಿತವಾಗಿರುವ ಈ ರೈಲು ಕಾನ್ಪುರ ಮತ್ತು ಅಲಹಾಬಾದ್‌ಗಳಲ್ಲಿ ನಿಲುಗಡೆ ಹೊಂದಿದ್ದು,ಎರಡು ಎಕ್ಸಿಕ್ಯೂಟಿವ್ ಚೇರ್ ಕಾರ್‌ಗಳನ್ನು ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News