ಪೂಜಾರ ಶತಕ: ಸೋಲಿನ ಸುಳಿಯಲ್ಲಿ ಕರ್ನಾಟಕ

Update: 2019-01-27 17:43 GMT

►ಜಾಕ್ಸನ್ ಅಜೇಯ ಶತಕಾರ್ಧ

►ಕಮರುತ್ತಿದೆ ಪಾಂಡೆ ಬಳಗದ ಫೈನಲ್ ಕನಸು

ಬೆಂಗಳೂರು, ಜ.27: ರಾಷ್ಟ್ರೀಯ ತಂಡದ ಆಟಗಾರ ಚೇತೇಶ್ವರ ಪೂಜಾರ ಬಾರಿಸಿದ ಅಮೋಘ ಶತಕದ ನೆರವಿನಿಂದ ಸೌರಾಷ್ಟ್ರ ತಂಡ ಕರ್ನಾಟಕ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಗೆಲುವಿನ ಬಾಗಿಲಿಗೆ ಬಂದು ನಿಂತಿದೆ. ಗೆಲುವಿಗೆ 279 ರನ್‌ಗಳ ಗುರಿ ಪಡೆದಿರುವ ಸೌರಾಷ್ಟ್ರ ನಾಲ್ಕನೇ ದಿನದಾಟ ಕೊನೆಗೊಂಡಾಗ 3 ವಿಕೆಟ್‌ಗೆ 224 ರನ್ ಗಳಿಸಿತ್ತು. ಇನ್ನು ಕೇವಲ 55 ರನ್ ಗಳಿಸಿದರೆ ಆ ತಂಡ ಫೈನಲ್‌ಗೆ ಪ್ರವೇಶಿಸಲಿದೆ.

ಪಂದ್ಯದ ನಾಲ್ಕನೇ ದಿನವಾದ ರವಿವಾರ 8 ವಿಕೆಟ್‌ಗೆ 237 ರನ್‌ಗಳಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ 239 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಅಜೇಯರಾಗುಳಿದಿದ್ದ ಆಲ್‌ರೌಂಡರ್ ಶ್ರೇಯಸ್ ಗೋಪಾಲ್(61) ಇಂದು ಯಾವುದೇ ರನ್ ಗಳಿಸದೇ ಧರ್ಮೇಂದ್ರಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಮೋರೆ, ಧರ್ಮೇಂದ್ರ ಬೌಲಿಂಗ್‌ನಲ್ಲೇ ಸೊನ್ನೆ ಸುತ್ತಿದರು. ಮಿಥುನ್(37) ಇಂದು ತಮ್ಮ ಮೊತ್ತಕ್ಕೆ 2 ರನ್ ಸೇರಿಸಿ ಅಜೇಯರಾಗುಳಿದರು.

ಸೌರಾಷ್ಟ್ರ ಪರ ಎರಡನೇ ಇನಿಂಗ್ಸ್‌ನಲ್ಲಿ ಧರ್ಮೇಂದ್ರ 5 ವಿಕೆಟ್ ಕಬಳಿಸಿದರು. ಉನಾದ್ಕತ್ ಮೂರು ವಿಕೆಟ್‌ಗೆ ತೃಪ್ತಿಪಟ್ಟರು.

ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಉನಾದ್ಕತ್ ಪಡೆಗೆ ವಿನಯಕುಮಾರ್ ಆರಂಭದಲ್ಲೇ ಆಘಾತ ನೀಡಿದರು. ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಸ್ನೆಲ್ ಪಟೇಲ್ ಹಾಗೂ 3ನೇ ಓವರ್‌ನ 2ನೇ ಎಸೆತದಲ್ಲಿ ವಿಶ್ವರಾಜ್ ಜಡೇಜಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಇಬ್ಬರೂ ದಾಂಡಿಗರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹರ್ವಿಕ್ ದೇಸಾಯಿ(9) ಅವರು ಮಿಥುನ್ ಎಸೆತದಲ್ಲಿ ಸಿದ್ಧಾರ್ಥ್‌ಗೆ ಕ್ಯಾಚ್ ನೀಡಿ ಔಟಾದಾಗ ತಂಡದ ಸ್ಕೋರ್ ಕೇವಲ 23 ರನ್ ಆಗಿತ್ತು. ಆಗ ಪಾಂಡೆ ಬಳಗದ ಗೆಲುವಿನ ಆಸೆ ಚಿಗುರೊಡೆದಿತ್ತು.

ಈ ಹಂತದಲ್ಲಿ ಜೊತೆಗೂಡಿದ ಪೂಜಾರ(ಅಜೇಯ 108) ಹಾಗೂ ಶೆಲ್ಡನ್ ಜಾಕ್ಸನ್(ಅಜೇಯ 90) ದಿನಪೂರ್ತಿ ಕರ್ನಾಟಕ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದರು. ನಿಧಾನವಾಗಿ ಇನಿಂಗ್ಸ್ ಕಟ್ಟುತ್ತಾ ಅವಕಾಶ ಸಿಕ್ಕಾಗ ಚೆಂಡನ್ನು ದಂಡಿಸುತ್ತಾ ಸಾಗಿರುವ ಈ ಜೋಡಿ ಮುರಿಯದ 4ನೇ ವಿಕೆಟ್ ಜೊತೆಯಾಟದಲ್ಲಿ 201 ರನ್ ಗಳಿಸಿದೆ. ಸೌರಾಷ್ಟ್ರ ತಂಡ ಗೆಲುವಿಗೆ ಇನ್ನು ಕೇವಲ 55 ರನ್ ಗಳಿಸಬೇಕಿದ್ದು, ಬಹುತೇಕ ಆತಿಥೇಯರ ಫೈನಲ್ ಪ್ರವೇಶದ ಕನಸು ಕಮರಿದೆ. ಕರ್ನಾಟಕ ಗೆಲ್ಲಬೇಕಾದರೆ ಪವಾಡ ನಡೆಯಬೇಕಷ್ಟೇ.

ಕ್ರೀಡಾಸ್ಫೂರ್ತಿ ಮರೆತ ಪೂಜಾರ?

 ರಣಜಿ ಸೆಮಿಫೈನಲ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ವಿನಯಕುಮಾರ್ ಅವರ ಎಸೆತವನ್ನು ಕೆಣಕಲು ಯತ್ನಿಸಿದ ಸೌರಾಷ್ಟ್ರ ಆಟಗಾರ ಚೇತೇಶ್ವರ ಪೂಜಾರ, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್‌ಗೆ ಕ್ಯಾಚ್ ನೀಡಿದ್ದರು. ಕರ್ನಾಟಕದ ಎಲ್ಲ ಆಟಗಾರರು ಸಾಕಷ್ಟು ಮನವಿ ಮಾಡಿಕೊಂಡರು. ಆದರೆ ಅಂಪೈರ್ ಔಟ್ ತೀರ್ಪು ನೀಡಲೇ ಇಲ್ಲ. ವಿನಯಕುಮಾರ್ ಹಾಗೂ ಅಂಪೈರ್ ಖಾಲಿದ್ ಹುಸೈನ್ ಸಯ್ಯದ್ ಮಧ್ಯೆ ಮಾತಿನ ಚಕಮಕಿ ನಡೆಯಿತು. 26ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ವೇಳೆ ಸೌರಾಷ್ಟ್ರ 68 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿತ್ತು. ತಾನು ಔಟಾಗಿದ್ದು ಸ್ಪಷ್ಟವಾಗಿದ್ದರೂ ಕ್ರೀಸ್ ಬಿಟ್ಟು ತೆರಳದ ಪೂಜಾರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪಂದ್ಯ ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಪೂಜಾರ ಅವರನ್ನು ಅಣಕಿಸಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿಯೂ ಪೂಜಾರ ಇದೇ ರೀತಿಯ ವರ್ತನೆಯಿಂದ ಟೀಕೆಗೊಳಗಾಗಿದ್ದರು. ಮಿಥುನ್ ಎಸೆತದಲ್ಲಿ ಕೇವಲ 1 ರನ್ ಗಳಿಸಿದ್ದಾಗ ಅವರು ಔಟಾಗಿದ್ದು ಸ್ಪಷ್ಟವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News