ಕಾಟಾಚಾರಕ್ಕೆ ಈಶ್ವರಪ್ಪ ಬರ ಅಧ್ಯಯನ ಮಾಡುತ್ತಿದ್ದಾರೆ: ಎಚ್.ಡಿ.ರೇವಣ್ಣ

Update: 2019-01-28 15:39 GMT

ಬೆಂಗಳೂರು, ಜ.28: ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಕಾಟಾಚಾರಕ್ಕೆ ಬರ ಅಧ್ಯಯನ ಮಾಡುತ್ತಿದ್ದಾರೆ. ಕಳೆದ ವರ್ಷವೂ ಬರ ಅಧ್ಯಯನ ಅಂತ ಬಿಜೆಪಿಯವರು ಮಾಡಿದ್ದರು. ಅದರ ವರದಿಯನ್ನು ಯಾರಿಗೆ ಕೊಟ್ಟರು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರಶ್ನಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿಗೆ ಆ ವರದಿಯನ್ನು ಕೊಟ್ಟಿದ್ದಾರೆಯೇ? ಬರಗಾಲ ಇದ್ದರೂ ಬಿಜೆಪಿಯವರು ರೆಸಾರ್ಟ್‌ಗೆ ಹೋಗಿದ್ದರು. ಪಂಚತಾರಾ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.ಇದೇನಾ ಬಿಜೆಪಿಯವರು ಮಾಡುವ ಬರ ಅಧ್ಯಯನ ಎಂದರು.

ನಾವು ಮಾಡುವ ಕೆಲಸಗಳಿಗೆ ರಾಜ್ಯದ ಜನತೆಯಿಂದ ಪ್ರಮಾಣ ಪತ್ರ ಬೇಕೆ ಹೊರತು, ಈಶ್ವರಪ್ಪ ನೀಡುವ ಪ್ರಮಾಣಪತ್ರದ ಅಗತ್ಯವಿಲ್ಲ. ಅವರು ತುಂಬಾ ದೊಡ್ಡವರು. ಅವರು ನೀಡಿರುವ ಹೇಳಿಕೆಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರೇವಣ್ಣ ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಲು ಸಿದ್ಧ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಏನು ಗೊತ್ತಿಲ್ಲ. ಮೈತ್ರಿ ಸರಕಾರದ ಎರಡು ಪಕ್ಷಗಳ ಮುಖಂಡರು ಮಾತನಾಡುತ್ತಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಈ ಬಗ್ಗೆ ಹೇಳಿಕೆ ನೀಡುತ್ತಾರೆಯೇ ಹೊರತು, ನಾನು ಮಾತನಾಡುವುದಿಲ್ಲ ಎಂದರು.

ನನಗೆ ನನ್ನ ಇಲಾಖೆ ಮುಖ್ಯ. ಇಲಾಖೆಯಲ್ಲಿ ತುಂಬಾ ಕೆಲಸಗಳು ಆಗಬೇಕಿದೆ. ನಾನು ನನ್ನ ಇಲಾಖೆಯ ಕೆಲಸಗಳಲ್ಲಿ ಮಗ್ನನಾಗಿದ್ದೇನೆ. ಸಮ್ಮಿಶ್ರ ಸರಕಾರದಲ್ಲಿನ ಯಾವುದೇ ವಿಚಾರಗಳ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ ಎಂದು ರೇವಣ್ಣ ಹೇಳಿದರು.

ಇತ್ತೀಚೆಗಷ್ಟೇ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದರ ಬಗ್ಗೆ ಮಾತನಾಡಿದ ಅವರು, ನಾನು ಹಾಗೂ ಇಲಾಖೆಯ ಆರು ಜನ ಅಧಿಕಾರಿಗಳ ತಂಡ ಆಸ್ಟ್ರೇಲಿಯಕ್ಕೆ ಹೋಗಿ ಬಂದೆವು. ಈ ಹಿಂದೆ ಕೆ-ಶಿಪ್ ಕಾಮಗಾರಿಗಳಿಗೆ ಆಸ್ಟ್ರೇಲಿಯದವರೆ ಸಲಹೆ ಮಾಡುತ್ತಿದ್ದರು. ಸಂಚಾರ ನಿಯಮಗಳು ಸೇರಿದಂತೆ ಹಲವು ನಿಯಮಗಳನ್ನು ಜನ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ ಎಂದರು.

ಆಸ್ಟ್ರೇಲಿಯದಲ್ಲಿ ಸಂಚಾರ ದಟ್ಟಣೆ ನಿಯಂತ್ರಣದಲ್ಲಿದೆ. ಗುಪ್ತಚರ ಸಂಚಾರ ವ್ಯವಸ್ಥೆ ಉತ್ತಮವಾಗಿದೆ. ಅದೇ ಮಾದರಿಯ ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲೂ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ರೇವಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News