ಸಿದ್ದಗಂಗಾ ಶ್ರೀಗಳಿಗೆ ಸಿಗದ ‘ಭಾರತ ರತ್ನ’: ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2019-01-28 15:53 GMT

ಬೆಂಗಳೂರು, ಜ.28: ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಕೇಂದ್ರದ ಮೋದಿ ಸರಕಾರ ಉದ್ದೇಶಪೂರ್ವಕವಾಗಿಯೇ ಭಾರತ ರತ್ನ ಪ್ರದಾನಿಸದೆ, ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಸೋಮವಾರ ನಗರದ ಮೌರ್ಯ ವೃತ್ತದ ಬಳಿ ಕೆಪಿಸಿಸಿ ಮಹಿಳಾ ಘಟಕದ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವೆ ರಾಣಿ ಸತೀಶ್, ಜಾತ್ಯತೀತ ವ್ಯಕ್ತಿತ್ವದ ಶಿವಕುಮಾರಸ್ವಾಮಿಗಳನ್ನು ಗೌರವಿಸಬೇಕಾದುದ್ದು ಕೇಂದ್ರ ಬಿಜೆಪಿ ಸರಕಾರದ ದೊಡ್ಡ ಜವಾಬ್ದಾರಿಯಾಗಿತ್ತು. ಜಾತಿ ಭೇದಲ್ಲದೆ ಎಲ್ಲ ವರ್ಗಗಳ ಮಕ್ಕಳಿಗೆ ಅಕ್ಷರ, ಅನ್ನ, ಆಸರೆ ನೀಡಿ ಬೆಳೆಸಿದ ಶಿವಕುಮಾರ ಸ್ವಾಮಿಗಳ ಸೇವೆ ಅತಿ ದೊಡ್ಡದು ಎಂದು ಹೇಳಿದರು.

ಈ ಸೇವೆಯನ್ನು ಪರಿಗಣಿಸದ ಕೇಂದ್ರ ಬಿಜೆಪಿ ಸರಕಾರ, ಪ್ರಶಸ್ತಿ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಇಡೀ ರಾಜ್ಯದ ಜನತೆ ಶಿವಕುಮಾರ ಸ್ವಾಮಿಗಳ ನಿಧನಕ್ಕೆ ಮಿಡಿದಿರುವ ಕಂಬನಿಯಿಂದ ಅವರ ವ್ಯಕ್ತಿತ್ವ ಏನೆಂಬುದನ್ನು ಕೇಂದ್ರ ಬಿಜಿಪಿ ಸರಕಾರ ಅರಿತುಕೊಳ್ಳಬೇಕಿತ್ತು ಎಂದು ತಿಳಿಸಿದರು.

ಗಣರಾಜ್ಯೋತ್ಸವಕ್ಕೂ ಮೊದಲು ಶಿವಕುಮಾರಸ್ವಾಮಿಗಳಿಗೆ ಭಾರತ ರತ್ನ ನೀಡಬೇಕೆಂದು ಇಡೀ ಜನತೆ ಒಕ್ಕೊರಲಿನಿಂದ ಆಗ್ರಸಿದರೂ ಕೇಂದ್ರ ಸರಕಾರ ಸೂಕ್ತವಾಗಿ ಪ್ರತಿಕ್ರಿಯಿಸದೇ ಅಸಡ್ಡೆಯಿಂದ ವರ್ತಿಸಿದೆ. ಇಂತಹ ಮಹಾನ್ ವ್ಯಕ್ತಿಯನ್ನು ಗುರುತಿಸಬೇಕಾಗಿರುವುದು ಸರಕಾರದ ಕರ್ತವ್ಯ ಎಂದರು.

ಇತರರಿಗೆ ಭಾರತ ರತ್ನ ವಿತರಿಸುವ ವೇಳೆ ಅಡ್ಡಿಯಾಗದ ನಿಯಮಗಳು ಶಿವಕುಮಾರಸ್ವಾಮಿಗಳಿಗೆ ಭಾರತ ರತ್ನ ನೀಡಲು ಕಾರಣವಾಯಿತೆ ಎಂದು ಪ್ರಶ್ನಿಸಿದ ಅವರು, ನಿಯಮಗಳಿಗೆ ತಿದ್ದುಪಡಿ ತಂದು ಭಾರತ ರತ್ನವನ್ನು ಶ್ರೀಗಳಿಗೆ ನೀಡಬೇಕಿತ್ತು. ಆದರೆ, ನಿರ್ಲಕ್ಷ್ಯ ಧೋರಣೆ ಹೊಂದಿದ ಕೇಂದ್ರ ಸರಕಾರದ ಕ್ರಮ ಇಡೀ ರಾಜ್ಯದ ಜನತೆಗೆ ಬೇಸರ ತಂದಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಪ್ಪ ಅಮರನಾಥ್, ಶಾಸಕಿ ಸೌಮ್ಯಾ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಜಲಜಾ ನಾಯಕ್, ಮಂಜುಳಾ ನಾಯ್ಡು ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News