ಸಿದ್ಧಗಂಗಾ ಶ್ರೀಗಳಿಗೆ ‘ಭಾರತ ರತ್ನ’ ನೀಡಲು ಒತ್ತಾಯಿಸಿ ಬಸವ ದಳ ಧರಣಿ

Update: 2019-01-28 16:08 GMT

ಬೆಂಗಳೂರು, ಜ.28: ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ರಾಷ್ಟ್ರೀಯ ಬಸವ ದಳ ಸದಸ್ಯರು ಧರಣಿ ನಡೆಸಿದರು.

ಸೋಮವಾರ ನಗರದ ಪುರಭವನದ ಮುಂಭಾಗ ರಾಷ್ಟ್ರೀಯ ಬಸವ ದಳ ಹಾಗೂ ವಿಶ್ವ ಕಲ್ಯಾಣ ಮಿಷನ್ ನೇತೃತ್ವದಲ್ಲಿ ಜಮಾಯಿಸಿದ ಸದಸ್ಯರು, ಕೇಂದ್ರ ಸರಕಾರ ಶ್ರೀಗಳಿಗೆ ಭಾರತ ರತ್ನ ನೀಡದೆ, ದ್ರೋಹವೆಸಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಸವ ದಳದ ಸಂಚಾಲಕಿ ಲೀಲಾದೇವಿ, ಸಿದ್ಧಗಂಗಾ ಮಠದಲ್ಲಿ ಶ್ರೀಗಳು ಜಾತಿ, ಭೇದ, ಮತ, ಪಂಥ, ಧರ್ಮ, ಪಂಗಡ ಪರಿಗಣಿಸದೆ ಎಲ್ಲರನ್ನೂ ಭಕ್ತರೆಂದು ಪರಿಗಣಿಸಿ ಅಕ್ಷರ, ಅನ್ನ ದಾಸೋಹ ಮಾಡುತ್ತಿದ್ದರು ಎಂದು ತಿಳಿಸಿದರು.

ಸಿದ್ಧಗಂಗಾ ಮಠದಲ್ಲಿ ಲಕ್ಷಾಂತರ ಬಡ ಮಕ್ಕಳು ಶಿಕ್ಷಣ ಪಡೆದು ದೇಶ, ವಿದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿತ್ಯ ಸಹಸ್ರಾರು ಜನರಿಗೆ ಅನ್ನದಾಸೋಹ, ಸಾವಿರಾರು ಮಕ್ಕಳಿಗೆ ಅಕ್ಷರ ದಾಸೋಹ ಕಾಯಕದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಶತಮಾನದ ಸಂತ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರದ ಮೇಲೆ ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಒತ್ತಡ ಹಾಕಬೇಕು ಎಂದರು.

ಕಳೆದ ಹಲವು ವರ್ಷಗಳಿಂದ ಶಿವಕುಮಾರ ಸ್ವಾಮೀಜಿಗೆ ಬದುಕಿರುವಾಗಲೇ ಭಾರತ ರತ್ನ ನೀಡಬೇಕು ಎಂದು ಸಾರ್ವಜನಿಕರು ಹಾಗೂ ಭಕ್ತರು ಒತ್ತಾಯ ಮಾಡುತ್ತಿದ್ದರು. ಆದರೆ, ಕೇಂದ್ರ ಸರಕಾರ ಈವರೆಗೂ ಕ್ರಮ ಕೈಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಗಳಿಗೆ ಮರಣೋತ್ತರ ‘ಭಾರತ ರತ್ನ’ ನೀಡುವಂತೆ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಬಸವದಳದ ಸಂಚಾಲರಾದ ಶರಣೆ ವಿನೋದಮ್ಮ, ವಿಜಯಾಂಬಿಕೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News