ಗ್ರಾಪಂ ಗಳು ಕಾಯ್ದೆಯ ಅವಕಾಶಗಳನ್ನು ಚಲಾಯಿಸಿ ಸದೃಢವಾಗಬೇಕು: ಸಚಿವ ಕೃಷ್ಣಭೈರೇಗೌಡ

Update: 2019-01-28 16:25 GMT

ಬೆಂಗಳೂರು, ಜ.28: ಗ್ರಾಮ ಪಂಚಾಯತ್ ಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನ ವೆಚ್ಚ ಮಾಡುವ ಸಂಸ್ಥೆಗಳಾಗಿ ಉಳಿಯದೆ, ಕಾಯ್ದೆಯ ಅವಕಾಶಗಳನ್ನು ಚಲಾಯಿಸಿ ಸದೃಢವಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಸೋಮವಾರ ನಗರದಲ್ಲಿ ಪಂಚಾಯತ್‌ ರಾಜ್ ಮಂತ್ರಾಲಯ, ಹೈದರಾಬಾದ್‌ನ ಎನ್‌ಐಆರ್‌ಡಿ ಹಾಗೂ ಮೈಸೂರಿನ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕಾಭಿವೃದ್ಧಿ ಮತ್ತು ಆದಾಯ ವೃದ್ಧಿಸುವ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ್ ಗಳಿಂದ ನಿರೀಕ್ಷಿತ ರೀತಿಯಲ್ಲಿ ಯೋಜನೆಗಳ ತಯಾರಿ ಆಗುತ್ತಿಲ್ಲ. ಸ್ಥಳೀಯ ಸಂಪನ್ಮೂಲಗಳ ಕ್ರೋಡೀಕರಣ, ಸ್ಥಳೀಯ ಬೇಡಿಕೆಗಳು ಹಾಗೂ ಆದ್ಯತೆಗಳನ್ನು ಯೋಜಿಸಿ ಅನುಷ್ಠಾನಕ್ಕೆ ತರುವಂತಾಗಬೇಕು ಎಂದು ಕೃಷ್ಣಭೈರೇಗೌಡ ಹೇಳಿದರು.

ರಾಷ್ಟ್ರದ ಬಹಳಷ್ಟು ಗ್ರಾಮ ಪಂಚಾಯತ್ ಗಳು ಸಂವಿಧಾನದತ್ತವಾಗಿ ಸ್ವತಂತ್ರ ಸರಕಾರಗಳಾಗಿ ಅಸ್ತಿತ್ವಕ್ಕೆ ಬಂದಿದ್ದರೂ ಬೇರೆ ಬೇರೆ ಕಾರಣಗಳಿಗಾಗಿ, ಕಾರ್ಯ ನಿರ್ವಹಣೆಯಲ್ಲಿ ವೈಫಲ್ಯವನ್ನು ಎದುರಿಸುತ್ತಿವೆ. ಗ್ರಾಮ ಪಂಚಾಯತ್ ಗಳು ಬಲವರ್ಧನೆ ಹಾಗೂ ಕ್ರಿಯಾಶೀಲ ಕಾರ್ಯ ನಿರ್ವಹಣೆಗೆ ಅನುವಾಗುವಂತೆ ಈ ಕಾರ್ಯಾಗಾರದಲ್ಲಿ ಚರ್ಚಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದ ಪಂಚಾಯತ್‌ ರಾಜ್ ಮಂತ್ರಾಲಯದ ವಿಶೇಷ ಕಾರ್ಯದರ್ಶಿ ಬಾಲಪ್ರಸಾದ್ ಮಾತನಾಡಿ, ನಮ್ಮ ಮಂತ್ರಾಲಯವು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಅಡಿಯಲ್ಲಿ ಸಾಕಷ್ಟು ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಲಭ್ಯವಾಗುವ ಸಾಕಷ್ಟು ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಆರ್ಥಿಕ ಚಟುವಟಿಕೆಗಳು ವೃದ್ಧಿಸಲು ಗ್ರಾಮ ಪಂಚಾಯತ್ ಗಳು ಮುಂದಾಗಬೇಕೆಂದು ಕರೆ ನೀಡಿದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮಾತನಾಡಿ, ಪಂಚಾಯತ್ ಗಳು ಸಾಂಪ್ರದಾಯಿಕವಾಗಿ ಮೂಲ ಸೌಕರ್ಯಗಳಾದ ನೀರು, ನೈರ್ಮಲ್ಯ, ಬೀದಿ ದೀಪಗಳ ಚಟುವಟಿಕೆಗಳಿಗೆ ಸೀಮಿತವಾಗದೆ, ತನ್ನ ವ್ಯಾಪ್ತಿಯ ಅಧಿಕಾರ, ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿದೆ ಎಂದರು.

ಸಾಕಷ್ಟು ಗ್ರಾಮೀಣ ಆರ್ಥಿಕ ಸಂಪನ್ಮೂಲ ವೃದ್ಧಿಗೆ ನೆರವಾಗುವಂತೆ, ಸಾಮರ್ಥ್ಯಾಭಿವೃದ್ಧಿ ಕೊರತೆಗಳನ್ನು ಇಂತಹ ಕಾರ್ಯಾಗಾರಗಳು ನೀಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಶಿಲ್ಪಾನಾಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News