ಧರ್ಮ ಉಳಿದರೆ ದೇಶ ಉಳಿಯುತ್ತದೆ: ನಿರ್ಮಲಾನಂದ ಸ್ವಾಮೀಜಿ

Update: 2019-01-28 16:28 GMT

ಬೆಂಗಳೂರು, ಜ.28: ಭಾರತ ಧರ್ಮವಿದ್ದಂತೆ, ಈ ಧರ್ಮವೆಂಬ ಭಾರತ ಉಳಿದರೆ ಮಾತ್ರ ಇಡೀ ಜಗತ್ತು ಉಳಿಯುತ್ತದೆ. ಯಾಕೆಂದರೆ ಧರ್ಮ ಅಕ್ಸಿಜನ್ ಇದ್ದ ಹಾಗೆ. ಆಕ್ಸಿಜನ್ ಇಲ್ಲವಾದರೆ ಮನುಷ್ಯ ಹೇಗೆ ಸಾಯುತ್ತಾನೋ ಅದೇ ರೀತಿ ಧರ್ಮ ಇಲ್ಲದಿದ್ದರೆ ನಮ್ಮ ದೇಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಸೋಮವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಇನ್‌ಸ್ಪೈರ್ ಪುಸ್ತಕ ಪ್ರಕಾಶನವು ಹಮ್ಮಿಕೊಂಡಿದ್ದ ಡಾ. ಎಚ್.ಎಂ. ಚಂದ್ರಶೇಖರ್ ಅವರ ಕನ್ನಡ ಅನುವಾದಿತ ಕೃತಿ (ಮೂಲ: ಶಂತನು ಗುಪ್ತ) ‘ಮೋದಿ ಮೆಚ್ಚಿದ ಯೋಗಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತ ಧರ್ಮವಿದ್ದಂತೆ, ಈ ಧರ್ಮವೆಂಬ ಭಾರತ ಉಳಿದರೆ ಮಾತ್ರ ಇಡೀ ಜಗತ್ತು ಉಳಿಯುತ್ತದೆ. ಯಾಕೆಂದರೆ ಧರ್ಮ ಅಕ್ಸಿಜನ್ ಇದ್ದ ಹಾಗೆ. ಆಕ್ಸಿಜನ್ ಇಲ್ಲವಾದರೆ ಮನುಷ್ಯ ಹೇಗೆ ಸಾಯುತ್ತಾನೋ ಅದೇ ರೀತಿ ಧರ್ಮ ಇಲ್ಲದಿದ್ದರೆ ನಮ್ಮ ದೇಶ ಕಲ್ಪಿಸಲು ಸಾಧ್ಯವಿಲ್ಲ. ಇಂತಹ ಧರ್ಮ ಪರಂಪರೆಯಲ್ಲಿ ಬಂದವರು ಯೋಗಿ ಆದಿತ್ಯನಾಥ ಎಂದು ನುಡಿದರು.

ಸನ್ಯಾಸಿಯಾಗಿದ್ದ ಯೋಗಿ ಆದಿತ್ಯನಾಥರು ಏಕಾಏಕಿ ಸಿಎಂ ಆಗಲಿಲ್ಲ. ಅವರು ಐದು ಬಾರಿ ಎಂಪಿ ಆಗಿದ್ದು, ಬಹಳ ಹಿಂದಿನಿಂದಲೂ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಸಿಎಂ ಪಟ್ಟಕ್ಕೆ ಏರಿದ ಬಗ್ಗೆ ಹಲವು ಜಿಜ್ಞಾಸೆಗಳೇ ಹುಟ್ಟಿಕೊಂಡವು. ಅನೇಕರಲ್ಲಿ ಗೊಂದಲಗಳು ಮೂಡಿದ್ದವು. ಆದರೆ ಯೋಗಿ ಅವರು ಏಕಾಏಕಿ ರಾಜಕಾರಣಕ್ಕೆ ಬಂದವರಲ್ಲ ಎಂದು ಪುನರುಚ್ಚರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಜಂಗಲ್ ರಾಜ್ಯವಾಗಿದ್ದ ಉತ್ತರ ಪ್ರದೇಶ ಇಂದು ನಿರ್ಭೀತ ರಾಜ್ಯವಾಗಿದೆ. ಇಂತಹ ನೂರಾರು ಯೋಗಿಗಳು ಹುಟ್ಟಬೇಕು. ರಾಜ್ಯವನ್ನು ಆಳಬೇಕು ಎಂದರು.

ಯೋಗಿ ಆದಿತ್ಯನಾಥ ಅವರು ನಮ್ಮ ಆದಿಚುಂಚನಗಿರಿ ಪರಂಪರೆಯಿಂದ ಬಂದವರು. ಗೋರಖ್‌ಪುರ ಅವರಿಗೆ ಎರಡನೇ ಮಠ. ಅವರು ಉತ್ತರ ಪ್ರದೇಶದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾದರಿ ರಾಜ್ಯವನ್ನಾಗಿಸುವ ಕನಸು ಹೊಂದಿದ್ದಾರೆ ಎಂದು ಹೇಳಿದರು.

ಯದುಗಿರಿಯ ಯತಿರಾಜ ಮಠಾಧ್ಯಕ್ಷರಾದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಮಾತನಾಡಿ, ಸಮಾಜಮುಖಿ ಚಿಂತನೆ ರಾಷ್ಟ್ರದಲ್ಲಿ ನಿರಂತರವಾಗಿ ನಡೆಯಬೇಕು. ಸಮಾಜಮುಖಿಯಾಗಿ ಹೋದರಷ್ಟೇ ಸನ್ಯಾಸಿ ಜೀವನ ಸಾರ್ಥಕವಾಗುತ್ತದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿದ್ದು ನಮ್ಮೆಲ್ಲ ಸಂತರಿಗೆ ಸಂಭ್ರಮ ತಂದಿದೆ. ಅಲ್ಲಿ ಅಧ್ಯಾತ್ಮ ವಾತಾವರಣವಿದೆ. ದೀನ ದಲಿತರಿಗೆ ಬಡವರಿಗೆ ದಾರಿ ದೀಪವಾಗಬಹುದು ಎನ್ನುವ ಆಶಯ ನಮ್ಮದು ಎಂದು ನುಡಿದರು.

ಸಮಾರಂಭದಲ್ಲಿ ಸುಚಿತ್ರ ಫಿಲಂ ಸೊಸೈಟಿ ಅಧ್ಯಕ್ಷ ಕೆ.ವಿ.ಆರ್.ಟ್ಯಾಗೂರ್, ಸಿಲಿಕಾನ್ ಸಿಟಿ ಕಾಲೇಜು ಅಧ್ಯಕ್ಷ ಡಾ. ಎಚ್.ಎಂ. ಚಂದ್ರಶೇಖರ್, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News