ಕೆರೆಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ನೀಡಲು ಪ್ರಸ್ತಾವ: ಸಣ್ಣ ನೀರಾವರಿ ಸಚಿವ ಪುಟ್ಟರಾಜು

Update: 2019-01-28 16:38 GMT

ಬೆಂಗಳೂರು, ಜ. 28: ರಾಜ್ಯದಲ್ಲಿನ ಕೆರೆಗಳನ್ನು ನದಿ ಮೂಲಗಳಿಂದ ನೀರಿನಿಂದ ಭರ್ತಿ ಮಾಡಲು 3 ಸಾವಿರ ಕೋಟಿ ರೂ.ಗಳನ್ನು ಒದಗಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 3600 ಕೆರೆಗಳನ್ನು ದುರಸ್ತಿಗೆ ನೆರವು ನೀಡಲು ಮನವಿ ಮಾಡಲಾಗಿದೆ ಎಂದು ಹೇಳಿದರು.

ಕೆ.ಸಿ.ವ್ಯಾಲಿ ಮಾದರಿಯಲ್ಲೆ ನೆಲಮಂಗಲ, ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿನ ಕೆರೆಗಳ ಪುನರುಜ್ಜೀವನಕ್ಕೆ ಕೆಂಗೇರಿಯ ವೃಷಭಾವತಿ ಕಣಿವೆಯಲ್ಲಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಪೂರೈಕೆ ಮಾಡಲು ಉದ್ದೇಶಿಸಿದ್ದು, 800 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಪುಟ್ಟರಾಜು ತಿಳಿಸಿದರು.

ಸಿಎಸ್‌ಆರ್ ನಿಧಿ: ಬೆಂಗಳೂರು ನಗರದ ಕೆರೆಗಳನ್ನು ಅಭಿವೃದ್ಧಿಪಡಿಸಲು ಐಟಿ ಕಂಪೆನಿಗಳು ಮುಂದೆ ಬಂದಿದ್ದು, 700 ಕೋಟಿ ರೂ.ಸಿಎಸ್‌ಆರ್ ನಿಧಿ ಕೆರೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಶೀಘ್ರದಲ್ಲೆ ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಕೆರೆಗಳನ್ನು ಅಭಿವೃದ್ಧಿಪಡಿಸಲು ಐಟಿ ಕಂಪೆನಿಗಳಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ನೀಡಲಾಗುವುದು. ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ನೀರಿನ ಲಭ್ಯತೆ ಹೆಚ್ಚಾಗಲಿದೆ ಎಂದು ಅವರು ತಿಳಿಸಿದರು.

ರಾಜಿ ಪ್ರಶ್ನೆಯೇ ಇಲ್ಲ: ಕೆಆರ್‌ಎಸ್ ಜಲಾಶಯ ಉಳಿಸುವ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ. ಬೇಬಿ ಬೆಟ್ಟದ ಕಲ್ಲು ಕೋರೆಯಲ್ಲಿನ ಸ್ಫೋಟದಿಂದ ಜಲಾಶಯಕ್ಕೆ ಹಾನಿಯಾಗುತ್ತದೆಂಬ ಬಗ್ಗೆ ತಜ್ಞರಿಂದ ವರದಿ ಪಡೆದು, ಪರಿಶೀಲನೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಡಿಸ್ನಿ ಲ್ಯಾಂಡ್ ಅಭಿವೃದ್ಧಿಯಿಂದ ಜಲಾಶಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಈ ಸಂಬಂಧವೂ ತಜ್ಞರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಭೆ ನಡೆಸಿ, ಸ್ಥಳೀಯರಲ್ಲಿನ ಎಲ್ಲ ಸಂಶಯಗಳನ್ನು ಪರಿಹರಿಸಲಿದ್ದಾರೆ ಎಂದ ಅವರು, ಇತ್ತೀಚೆಗೆ ಎಲ್ಲ ವಿಚಾರದಲ್ಲಿಯೂ ರಾಜಕೀಯ ಮಾಡಲಾಗುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News