ಮಂಗನ ಕಾಯಿಲೆ: ರೋಗಿಗಳ ಸಂಪೂರ್ಣ ವೆಚ್ಚ ಸರಕಾರವೇ ಭರಿಸಲು ಎಸ್‌ಯುಸಿಐ ಒತ್ತಾಯ
ಬೆಂಗಳೂರು, ಜ. 28: ಮಂಗನ ಕಾಯಿಲೆಯಿಂದ ಮೃತರಾದವರ ಕುಟುಂಬಗಳಿಗೆ ನ್ಯಾಯಯುತ ಪರಿಹಾರ ನೀಡಿ. ಕಾಯಿಲೆಯುಳ್ಳ ರೋಗಿಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಉಮಾ ಆಗ್ರಹಿಸಿದ್ದಾರೆ.
ಮಂಗನ ಕಾಯಿಲೆಗೆ ಅವಶ್ಯಕತೆ ಇರುವಷ್ಟು ಲಸಿಕೆಯನ್ನು ತಯಾರಿಸಿ, ಪೂರೈಸಲು ತುರ್ತುಕ್ರಮ ಕೈಗೊಳ್ಳಬೇಕು. ರೋಗ ಹರಡುವ ಉಣ್ಣೆಯನ್ನು ನಿಯಂತ್ರಿಸಲು ಬೇಕಾದ ಡಿಎಂಪಿ ತೈಲವನ್ನು ಶಿವಮೊಗ್ಗ ಮತ್ತು ಇತರ ಜಿಲ್ಲೆಗಳಿಗೆ ತಕ್ಷಣವೇ ಪೂರೈಕೆ ಮಾಡಬೇಕು. ಕಾಯಿಲೆ ಭೀತಿಯಿಂದ ಕೃಷಿ ಕೆಲಸ ಸ್ಥಗಿತಗೊಂಡು ನಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
ಮಂಗನ ಕಾಯಿಲೆ ಮತ್ತಿತರ ತೀವ್ರ ಜ್ವರಗಳಿಗೆ ಚಿಕಿತ್ಸೆ ನೀಡುವಂಥ ಸುಸಜ್ಜಿತ ಆಸ್ಪತ್ರೆಯನ್ನು ಶಿವಮೊಗ್ಗದಲ್ಲಿ ಆರಂಭಿಸಿ, ರೋಗಪತ್ತೆ ಪ್ರಯೋಗಾಲಯ ಮತ್ತು ಲಸಿಕೆ ಉತ್ಪಾದನಾ ಕೇಂದ್ರವನ್ನು ಕೂಡಲೇ ಆರಂಭಿಸಬೇಕು. ಅಲ್ಲದೆ, 30 ವರ್ಷಗಳಿಂದ ಬಳಸುತ್ತಿರುವ ಲಸಿಕೆಯನ್ನು ಸುಧಾರಿಸಲು ಬೇಕಾದ ಸಂಶೋಧನೆಗೆ ಒತ್ತು ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.