ಗಾಂಧೀಜಿ ಸ್ಮಾರಕ ವೀಕ್ಷಣೆಗೆ ಅವಕಾಶ ಕೋರಿ ಅರ್ಜಿ: ಮನವಿ ಪರಿಗಣಿಸಲು ಹೈಕೋರ್ಟ್ ನಿರ್ದೇಶನ

Update: 2019-01-28 17:19 GMT

ಬೆಂಗಳೂರು, ಜ.28: ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಹೊಟೇಲ್ ಲಲಿತ್ ಅಶೋಕ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸ್ಮಾರಕ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುವ ಸಂಬಂಧ ಅರ್ಜಿದಾರರ ಮನವಿಯನ್ನು ಪರಿಗಣಿಸಿ 12 ವಾರಗಳಲ್ಲಿ ಇತ್ಯರ್ಥಪಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಸಂಬಂಧ ಸಾಂಸ್ಕೃತಿಕ ಹಾಗೂ ಸಮಾಜ ಸೇವಾ ಸಂಘಟನೆ ಸಮರ್ಪಣಾದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹೊಸಮನಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿತು.

ಮಹಾತ್ಮಾ ಗಾಂಧೀಜಿಯವರು 1927ರಲ್ಲಿ ಬೆಂಗಳೂರಿಗೆ ಭೇಟಿ ಕೊಟ್ಟಾಗ ಕುಮಾರಕೃಪಾ ರಸ್ತೆಯ ಈ ಪ್ರದೇಶದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು, ಪ್ರಾರ್ಥನೆ ಕೈಗೊಂಡಿದ್ದರು. ಆ ಜಾಗದಲ್ಲಿ ‘ಜ್ಯೋತಿ ವೃಕ್ಷ’ ಹೆಸರಲ್ಲಿ ಗಿಡ ನೆಟ್ಟು ಸ್ಮಾರಕ ನಿರ್ಮಾಣ ಮಾಡಲಾಗಿದೆ. ಆ ಜಾಗ ಈಗ ಅಶೋಕ ಹೊಟೇಲ್ ಆವರಣದ ವ್ಯಾಪ್ತಿಯಲ್ಲಿದ್ದು, ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ನಿರ್ಬಂಧವಿದೆ. ಸಾರ್ವಜನಿಕರು ಸ್ಮಾರಕ ವೀಕ್ಷಣೆಗೆ ಹೋದಾಗಲೆಲ್ಲ ಹೊಟೇಲ್‌ನ ಭದ್ರತಾ ಸಿಬ್ಬಂದಿಯೊಂದಿಗೆ ಗಲಾಟೆ ನಡೆಯುತ್ತದೆ, ಹೀಗಾಗಿ ಅರ್ಜಿದಾರರು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಖಾಸಗಿ ಹೊಟೇಲ್ ಆವರಣದಲ್ಲಿರುವ ಗಾಂಧಿ ಸ್ಮಾರಕದ ಬಳಿ ಸ್ವಾತಂತ್ರ ದಿನಾಚಾರಣೆ ಹಾಗೂ ಗಾಂಧೀ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ 2018ರ ಆ.7ಕ್ಕೆ ಮನವಿ ಮಾಡಲಾಗಿತ್ತು. ಆದರೆ, ಇಲ್ಲಿವರೆಗೆ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ, ಮನವಿಯನ್ನು ಪರಿಗಣಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಖಾಸಗಿ ಹೊಟೇಲ್‌ನ ಆವರಣದಿಂದ ಸ್ಮಾರಕವನ್ನು ಬೇರ್ಪಡಿಸಿ, ಅದಕ್ಕೆ ಸಾರ್ವಜನಿಕರಿಗೆ ಪ್ರತ್ಯೇಕ ಪ್ರವೇಶಕ್ಕೆ ವ್ಯವಸ್ಥೆ ಮಾಡಬೇಕು. ಸ್ಮಾರಕ ವೀಕ್ಷಣೆಗೆ ಭೇಟಿ ನೀಡುವ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಅರ್ಜಿದಾರರ ಪರವಾಗಿ ವಕೀಲ ಜಿ.ಆರ್.ಮೋಹನ್ ಅವರು ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News