ಕೆಪಿಎಸ್‌ಸಿ ನೇಮಕಾತಿ ಹಗರಣ: ಅಂತಿಮ ನಿರ್ಧಾರ ಕೈಗೊಳ್ಳಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2019-01-28 17:22 GMT

ಬೆಂಗಳೂರು, ಜ.28: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 1998, 1999 ಹಾಗೂ 2004ರ ಸಾಲಿನ 723 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯಲ್ಲಿರುವ ಅಸರ್ಮಥರನ್ನು ಹೊರಹಾಕಿ ಎಂಬ ಹೈಕೋರ್ಟ್ ಆದೇಶದ ಅನುಸಾರ 2014ರಲ್ಲಿ ಸಿದ್ಧಪಡಿಸಲಾಗಿದ್ದ ಪರಿಷ್ಕೃತ ಪಟ್ಟಿಯನ್ನು ಗೆಜೆಟ್‌ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಆದರೆ, ಈ ಪಟ್ಟಿಗೆ ಒಪ್ಪಿಗೆ ನೀಡುವ ಬಗ್ಗೆ ಸರಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ವಿಚಾರಣೆಗೆ ಬಾಕಿ ಇದೆ ಎಂದು ಕೆಪಿಎಸ್‌ಸಿ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತು ಎಸ್.ಶ್ರೀನಿವಾಸ್ ಸೇರಿದಂತೆ ಐವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಬಿ.ಎಂ.ಶ್ಯಾಮ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೆಪಿಎಸ್‌ಸಿ ಪರ ವಕೀಲರು ಆಯೋಗದ ಕಾರ್ಯದರ್ಶಿಯ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಪರಿಷ್ಕೃತ ನೇಮಕ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 2016ರ ಜೂನ್ 21ರಂದು ನೀಡಿದ್ದ ತೀರ್ಪು ಅನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಮೇಲ್ಮನವಿಗೆ ಸಂಬಂಧಿಸಿದಂತೆ 2018ರ ಎಪ್ರಿಲ್ 11ರವರೆಗೆ ತಡೆ ಇತ್ತು. ಆನಂತರ ಮೇಲ್ಮನವಿ ವಜಾಗೊಂಡಿತ್ತು ಎಂದು ತಿಳಿಸಲಾಗಿದೆ.

ಹೈಕೋರ್ಟ್ ನಿರ್ದೇಶನದಂತೆ ಆಯೋಗವು 2018ರ ಜೂನ್ 6ರಂದು ಸರಕಾರಕ್ಕೆ ಹೊಸ ಪಟ್ಟಿಯನ್ನು ಕಳುಹಿಸಿಕೊಟ್ಟಿದೆ. ಎಲ್ಲೂ ನಾವು ಹೈಕೋರ್ಟ್ ತೀರ್ಪು ಉಲ್ಲಂಘಿಸಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಪರಿಷ್ಕೃತ ನೇಮಕಾತಿ ಪಟ್ಟಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಿ ಸರಕಾರಕ್ಕ್ಕೂ ಕಳುಹಿಸಿದ್ದೇವೆ. ಹೀಗಾಗಿ, ಆಯೋಗದ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಡಬೇಕು ಎಂದು ಕೋರಲಾಗಿದೆ.

ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರು ವಾದಿಸಿ, 2016ರ ಜನವರಿ 16ರಂದು ನೀಡಲಾದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸುಪ್ರೀಂ ಕೋರ್ಟ್‌ನಲ್ಲಿಯೂ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬಾಕಿ ಇದೆ. ಹೀಗಾಗಿ ಅರ್ಜಿ ಇತ್ಯರ್ಥವಾಗುವವರೆಗೆ ಇಲ್ಲಿನ ಪ್ರಕರಣಕ್ಕೆ ಇನ್ನೊಂದಿಷ್ಟು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆದಷ್ಟು ಶೀಘ್ರ ನಿರ್ಧಾರ ಕೈಗೊಂಡು ಪ್ರಕರಣವನ್ನು ಮುಕ್ತಾಯಗೊಳಿಸಿ ಎಂದು ಮೌಖಿಕ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News