ಪ್ರಜಾಪ್ರಭುತ್ವವನ್ನು ಅಪಹರಿಸಲಾಗಿದೆ: ಗೌರಿ ನೆನಪಿನ ಉಪನ್ಯಾಸದಲ್ಲಿ ಅಬ್ದುಸ್ಸಲಾಂ ಪುತ್ತಿಗೆ

Update: 2019-01-29 15:50 GMT

ಬೆಂಗಳೂರು, ಜ.29: ಭಾರತದ ಪ್ರಜಾಪ್ರಭುತ್ವವನ್ನು ಉಳ್ಳವರು ಅಪಹರಿಸಿದ್ದು, ಅದನ್ನು ಕಿತ್ತುಕೊಳ್ಳಬೇಕು. ನಮ್ಮೆಲ್ಲ ಸಮಸ್ಯೆಗಳ ಪರಿಹಾರ ಪ್ರಜಾತಂತ್ರ ವ್ಯವಸ್ಥೆ ಸ್ಥಾಪನೆಯಿಂದ ಸಾಧ್ಯ ಎಂದು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗೌರಿ ದಿನದ ಅಂಗವಾಗಿ ‘ಅಮ್ಮಿ’ ಕಿರುಚಿತ್ರ ಪ್ರದರ್ಶನ ಹಾಗೂ ಗೌರಿ ನೆನಪಿನ ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಗತಿಪರರು, ವಿಚಾರವಾದಿಗಳು ಹೆಚ್ಚಿನ ಮಟ್ಟದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಕೆಳಗಿಳಿಸಬೇಕು ಎನ್ನುತ್ತಾರೆ. ಕೋಮುವಾದಿ ಪಕ್ಷದಿಂದ ನಾವಿಂದು ನಿರಾಶರಾಗಿದ್ದೇವೆ. ಆದರೆ, ಅದಕ್ಕೆ ಪರ್ಯಾಯ ಏನಿದೆ ಎಂದ ಅವರು, ಸೆಕ್ಯುಲರ್ ಪಕ್ಷವೆಂದು ಗುರುತಿಸುವ ಪಕ್ಷದ ನಾಯಕರು ಕೋಮುವಾದ, ಮೂಲಭೂತವಾದದ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಪ್ಯಾಶಿಸಂ ಎಂಬ ಪದ ಬಳಕೆಯನ್ನೂ ಮಾಡುವುದಿಲ್ಲ ಎಂದು ವಿಷಾಧಿಸಿದರು.

ನಾಥೂರಾಮ್ ಗೋಡ್ಸೆಯನ್ನು ಆರಾಧಿಸುವವರು ಜ.30 ರಂದು ಗಾಂಧೀ ಭಾವಚಿತ್ರ ಮಾಲೆಯನ್ನು ಹಾಕುವ ಮೂಲಕ ಅವರ ಬಗ್ಗೆ ಭಾಷಣ ಮಾಡುತ್ತಿದ್ದಾರೆ. ಇಂದು ಅದೇ ಪರಿವಾರದವರು ಹತ್ಯೆ ಮಾಡಿದ ಗೌರಿ ದಿನವನ್ನು ನಾವಿಲ್ಲಿ ಆಚರಣೆ ಮಾಡುತ್ತಿದ್ದೇವೆ. ಇನ್ನು ಜ.26 ರಂದು ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡುತ್ತಿದ್ದು, ಸ್ವತಂತ್ರ ಭಾರತದ ಆಶಯಗಳನ್ನು ಹತ್ಯೆ ಮಾಡಿದ್ದನ್ನು ಅಂದು ನೆನಪಿಸುತ್ತದೆ ಎಂದು ಹೇಳಿದರು.

ಇಂದಿನ ವ್ಯವಸ್ಥೆ ಹಾಗೂ ಮಾಧ್ಯಮ ಗುಲಾಮರಿಗೆ ನೀವು ದಣಿಗಳು ಎಂದು ಬಿಂಬಿಸಲಾಗುತ್ತಿದೆ. ಇದರ ನಡುವೆ ವಾಸ್ತವ ಅಂಶಗಳನ್ನು ಮರೆಮಾಚಲಾಗುತ್ತಿದೆ. ಅಗತ್ಯವಿಲ್ಲದ ರಾಮ ಮಂದಿರ, ಮಸೀದಿ, ತಲಾಕ್ ಮತ್ತಿತರೆ ವಿಷಯಗಳನ್ನು ತಂದು ಜನರನ್ನು ಭ್ರಮೆಯಲ್ಲಿಡುತ್ತಿದ್ದಾರೆ. ಎಲ್ಲಿಯವರೆಗೆ ನಾವು ಪ್ರಭುಗಳು ಎಂಬ ಭ್ರಮೆಯಲ್ಲಿರುತ್ತೇವೆಯೋ ಅಲ್ಲಿಯವರೆಗೆ ವ್ಯವಸ್ಥೆಯ ವಿರುದ್ಧ ಸಂಘರ್ಷಕ್ಕೆ ಮುಂದಾಗಲ್ಲ ಎಂದರು.

ಸಮಾಜದಲ್ಲಿ ಸಂಘರ್ಷವಿಲ್ಲದೆ, ಸ್ವತಂತ್ರ ಹಾಗೂ ಸುಲಭವಾಗಿ ಯಾವುದೇ ನ್ಯಾಯ ಸಿಗುವುದಿಲ್ಲ. ನ್ಯಾಯ ಸಿಗಬೇಕಾದರೆ ಅದಕ್ಕಿರುವ ಮಾರ್ಗವೆಂದರೆ ಸಂಘರ್ಷ ಹಾಗೂ ತ್ಯಾಗದಿಂದ ಮಾತ್ರ ಸಾಧ್ಯ. ಉಚಿತವಾಗಿ ಸಿಗುವ ನ್ಯಾಯ ಅನುಷ್ಠಾನವಾಗಿರಲ್ಲ, ಕೇವಲ ಚಿತ್ರದಲ್ಲಿರುತ್ತದೆ. ಹಲವಾರು ವರ್ಷಗಳ ಹೋರಾಟ ಮಾಡಿದರೂ ಇನ್ನೂ ನ್ಯಾಯ ಸಿಗದ ಅನೇಕ ಸಂಗತಿಗಳಿವೆ ಎಂದು ನುಡಿದರು.

ಭಾರತದಲ್ಲಿ ಇಂದಿಗೂ ಶೇ.1 ರಷ್ಟು ಜನರು ದೇಶದ ಶೇ.74 ರಷ್ಟು ಸಂಪತ್ತಿನ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಸೊಮಾಲಿಯಾ, ಸುಡಾನ್, ಉಗಾಂಡ ದೇಶಗಳಲ್ಲಿ ಹಸಿವಿನಿಂದ ಸಾಯುವಷ್ಟು ಜನ ನಮ್ಮಲ್ಲಿ ಒಂದು ರಾಜ್ಯದಲ್ಲಿ ಸಾಯುತ್ತಿದ್ದಾರೆ. ಪ್ರತಿದಿನ 19 ಕೋಟಿ ಜನರು ರಾತ್ರಿ ಹಸಿವಿನಿಂದ ಮಲಗುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ನಮಗೆ ಸವಾಲಾಗಿರುವುದು ಮನುವಾದ ಹಾಗೂ ಜಾತಿವಾದ. ಇಂದಿಗೂ ನಮ್ಮಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಶೇ.60-70 ರಷ್ಟು ಜನರು ಇಂದಿಗೂ ಅದನ್ನು ಆಚರಣೆ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿಗೂ ಜಾತಿಯ ಅನುಭವವಾಗಿದೆ. ಆದರೆ, ಮೂರು ತಿಂಗಳ ನಂತರ ಅದರ ಕುರಿತು ತನಿಖೆ ಮಾಡಲು ಕ್ರಮ ಕೈಗೊಳ್ಳುತ್ತಾರೆ ಅಂದರೆ ನಮ್ಮ ವ್ಯವಸ್ಥೆ ಎಷ್ಟು ಜಾತೀಯತೆಯಿಂದ ನರಳುತ್ತಿದೆ ಎಂದು ಅರ್ಥವಾಗುತ್ತದೆ ಎಂದು ತಿಳಿಸಿದರು.

ಭಾರತ ದೇಶದಲ್ಲಿಂದು ಮಾಧ್ಯಮ ಕ್ಷೇತ್ರ ಸ್ವತಂತ್ರ ಮಾಧ್ಯಮವಾಗಿ ಇಲ್ಲ. ವಿಶ್ವದ ಸ್ವತಂತ್ರ ಮಾಧ್ಯಮ ಕ್ಷೇತ್ರಗಳ ಪಟ್ಟಿಯಲ್ಲಿ ಭಾರತ 138 ನೆ ಸ್ಥಾನದಲ್ಲಿದೆ. ಸಮಾಜಕ್ಕೆ ಕನ್ನಡಿಯಾಗಬೇಕಾದ ಮಾಧ್ಯಮವಿಂದು ನೂರು ಚೂರಾಗಿದೆ. ಭಾರತದ ಪಾರ್ಲಿಮೆಂಟ್, ಸಾಂವಿಧಾನಿಕ ವ್ಯವಸ್ಥೆ ಹಾಗೂ ರಾಜಕೀಯ ಪಕ್ಷಗಳನ್ನು ನಿಯಂತ್ರಣ ಮಾಡುತ್ತಿರುವವರು ಮಾಧ್ಯಮ ಕ್ಷೇತ್ರವನ್ನೂ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಅವರಿಗೆ ಇದರಿಂದ ಹಣ ಮಾಡಬೇಕು ಎಂಬ ಆಸೆಯಿಲ್ಲ. ಇಡೀ ಸಮಾಜವನ್ನು ನಿಯಂತ್ರಿಸಬೇಕು ಎಂಬುದು ಅವರ ಗುರಿಯಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿಚಾರವಾದಿ ಪ್ರೊ.ಬಾಬು ಮ್ಯಾಥ್ಯೂ, ಟ್ರಸ್ಟ್ ಸದಸ್ಯ ವಿ.ಎಸ್.ಶ್ರೀಧರ್, ವಕೀಲ ಬಾಲನ್, ಜೆಎನ್‌ಯು ವಿದ್ಯಾರ್ಥಿ ನಜೀಬ್ ಅವರ ತಾಯಿ ಪಾತಿಮಾ, ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ವಿಚಾರವಾದಿ ನಗರಗೆರೆ ರಮೇಶ್, ಟ್ರಸ್ಟ್‌ನ ಸದಸ್ಯ ದೀಪು ಉಪಸ್ಥಿತರಿದ್ದರು.

ದೇಶದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಸಂಘಪರಿವಾರ ಹಾಗೂ ಅವರ ಅಂಗ ಸಂಘಟನೆಗಳು ಅತ್ಯಂತ ಕ್ರಿಯಾಶೀಲವಾಗಿ ವಿದ್ಯಾರ್ಥಿ, ಯುವ ಸಮುದಾಯ ಹಾಗೂ ಸಾಮಾನ್ಯ ಜನರ ನಡುವೆ ಕೆಲಸ ಮಾಡುತ್ತಿವೆ. ಈ ಸಂದರ್ಭದಲ್ಲಿ ನಾವೆಲ್ಲರೂ ಕೋಮುವಾದ ಹಾಗೂ ಫ್ಯಾಶಿಸಂ ವಿರುದ್ಧ ಹೋರಾಡಲು ಸನ್ನದ್ಧರಾಗಬೇಕು. ನಮ್ಮಲ್ಲಿರುವ ಸಿಬಿಐ ಸೇರಿದಂತೆ ಮತ್ತಿತರೆ ಸಂಸ್ಥೆಗಳು ಸಂಪೂರ್ಣ ನಂಬಿಕೆಯನ್ನು ಕಳೆದುಕೊಂಡಿವೆ.

-ಪ್ರೊ.ಬಾಬು ಮ್ಯಾಥ್ಯೂ, ವಿಚಾರವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News