ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಬಿಗಿಪಟ್ಟು: ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ರಾಜಧಾನಿಗೆ ಲಗ್ಗೆ

Update: 2019-01-30 14:24 GMT

► 12 ದಿನಗಳ ಸುದೀರ್ಘ ಪಾದಯಾತ್ರೆ

► ಮದ್ಯನಿಷೇಧ ಆಂದೋಲನಕ್ಕೆ ವ್ಯಾಪಕ ಬೆಂಬಲ

ಬೆಂಗಳೂರು, ಜ.30: ರಾಜ್ಯಾದ್ಯಂತ ಸಂಪೂರ್ಣ ಮದ್ಯಪಾನವನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರಿಂದು ಪಾದಯಾತ್ರೆಯ ಮೂಲಕ ರಾಜಧಾನಿಗೆ ಆಗಮಿಸಿ ಸರಕಾರವನ್ನು ಒತ್ತಾಯಿಸಿದರು.

ಜ.19 ರಿಂದ ಚಿತ್ರದುರ್ಗದಿಂದ ಆರಂಭವಾದ ಮಹಿಳೆಯರ ಪಾದಯಾತ್ರೆ ಸುಮಾರು 12 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಸಂಚಾರ ಮಾಡಿ ಇಂದು ರಾಜ್ಯದ ರಾಜಧಾನಿಗೆ ಆಗಮಿಸಿದರು. ನಗರದ ಮಲ್ಲೇಶ್ವರ ಆಟದ ಮೈದಾನದಲ್ಲಿ ತಂಗಿದ್ದ ಹೋರಾಟಗಾರರು ಅಲ್ಲಿಂದ ಸರಕಾರ ಮದ್ಯ ನಿಷೇಧ ಮಾಡಬೇಕು. ಈ ಸಂಬಂಧ ಆದೇಶ ಮಾಡಬೇಕು ಎಂದು ಪಟ್ಟು ಹಿಡಿದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ, ಪೊಲೀಸರು ಹೋರಾಟಗಾರರನ್ನು ಮಾರ್ಗ ಮಧ್ಯೆ ತಡೆದು ಸ್ವಾತಂತ್ರ ಉದ್ಯಾನವನಕ್ಕೆ ಕರೆದೊಯ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕನಸುಗಳಲ್ಲಿ ಪ್ರಮುಖವಾದ ಮದ್ಯ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿರುವ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘವು ಸಂಘಟಿಸಿದ್ದ ಆಂದೋಲನದಲ್ಲಿ ಸುಮಾರು 200 ಕಿ.ಮೀ.ನಷ್ಟು ದೂರ ಹಿರಿಯ, ಕಿರಿಯ ಮಹಿಳೆಯರು, ಪುರುಷರು ಪಾಲ್ಗೊಂಡು ಸರಕಾರ ಈ ಸಂಬಂಧ ದಿಟ್ಟವಾದ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ವ್ಯಾಪಕ ಬೆಂಬಲ: ಮದ್ಯ ನಿಷೇಧಿಸುವಂತೆ ಹೋರಾಟ ನಡೆಸುತ್ತಿದ್ದ ಮಹಿಳೆಯರಿಗೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹೋರಾಟಗಾರ ಎಸ್.ಆರ್.ಹೀರೇಮಠ್, ವಿಧಾನಪರಿಷತ್ ಸದಸ್ಯೆ ಮೋಟಮ್ಮ, ರಂಗಕರ್ಮಿ ಪ್ರಸನ್ನ, ಅರುಂಧತಿ ನಾಗ್, ಲೇಖಕಿ ವನಮಾಲಾ ವಿಶ್ವನಾಥ್ ಸೇರಿದಂತೆ ವಿದ್ಯಾರ್ಥಿ, ಯುವಜನ, ರೈತ, ಮಹಿಳಾ ಪರ ಹಾಗೂ ದಲಿತ ಸಂಘಟನೆಗಳು ಬೆಂಬಲ ಸೂಚಿಸಿ ಆಂದೋಲನದಲ್ಲಿ ಕೈಜೋಡಿಸಿದ್ದವು.

ಪ್ರತಿಭಟನೆ ಕುರಿತು ಮಾತನಾಡಿದ ಎಚ್.ಎಸ್.ದೊರೆಸ್ವಾಮಿ, ಮದ್ಯಪಾನದಿಂದ ಸಾವು ಸಂಭವಿಸುತ್ತಿದ್ದು, ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಆದರೆ, ಮದ್ಯ ಮಾರಾಟಕ್ಕೆ ಸರಕಾರ ಉತ್ತೇಜನ ನೀಡುತ್ತಿದೆ. ಮದ್ಯ ಮಾರಾಟದಿಂದ ಬಂದ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಪಾಪದ ಹಣದಲ್ಲಿ ಆಡಳಿತ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಪೊಲೀಸ್ ಭದ್ರತೆ: ನಗರದ ಮಲ್ಲೇಶ್ವರ ಆಟದ ಮೈದಾನದಿಂದ ಆರಂಭವಾದ ಮೆರವಣಿಗೆಯು ವಿಧಾನಸೌಧದ ಕಡೆಗೆ ನುಗ್ಗುತ್ತದೆ ಎಂಬ ಆತಂಕದಿಂದ ಡಿಸಿಪಿ ಡಿ.ದೇವರಾಜು, ರವಿಚನ್ನಣ್ಣನವರ್ ನೇತೃತ್ವದಲ್ಲಿ ಸುಮಾರು 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರಿಂದ ಅಧಿಕ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಟ್ರಾಫಿಕ್ ಜಾಮ್:  ಮದ್ಯ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಇಲ್ಲಿನ ಸ್ವಾತಂತ್ರ ಉದ್ಯಾನವನದ ಬಳಿ ವಿಧಾನಸೌಧದ ಕಡೆಗೆ ತೆರಳಲು ಮುಂದಾದರು. ಈ ವೇಳೆ ಪೊಲೀಸರು ತಡೆದದ್ದರಿಂದ ಆಕ್ರೋಶಗೊಂಡ ಸಾವಿರಾರು ಮಹಿಳೆಯರು ಸಾಲಾಗಿ ಇಲ್ಲಿನ ರಸ್ತೆ ಮಧ್ಯದಲ್ಲಿಯೇ ಕುಳಿತು ಧರಣಿ ಆರಂಭಿಸಿದರು.

ಇದರಿಂದಾಗಿ ಮಲ್ಲೇಶ್ವರಂ, ಮೆಜೆಸ್ಟಿಕ್, ರೇಸ್‌ಕೋರ್ಸ್, ಕಾರ್ಪೋರೇಷನ್, ಆನಂದರಾವ್ ವೃತ್ತ, ಚಾಲುಕ್ಯ ವೃತ್ತ ಸೇರಿದಂತೆ ಮತ್ತಿತರೆ ಮಾರ್ಗಗಳಲ್ಲಿ ಅಧಿಕ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು.

ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದು ಚಿತ್ರದುರ್ಗದಿಂದ ಸುಮಾರು 200 ಕಿ.ಮೀ.ಗಳಷ್ಟು ದೂರದಿಂದ ಸಾವಿರಾರು ಮಹಿಳೆಯರು ಪಾದಯಾತ್ರೆಯ ಮೂಲಕ ರಾಜ್ಯದ ರಾಜಧಾನಿಗೆ ಆಗಮಿಸಿದ್ದಾರೆ. ಆದರೆ, ಇದುವರೆಗೂ ಅಧಿಕಾರದಲ್ಲಿರುವ ಯಾವೊಬ್ಬ ಜನಪ್ರತಿನಿಧಿಯೂ ಈ ಕಡೆ ತಲೆ ಹಾಕಿಲ್ಲ. ಪುರುಷ ಅಹಂಕಾರ ಬೆಳೆಸಿಕೊಂಡಿರುವ ಅವರು ಮಹಿಳೆಯರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಹಿಳೆಯರು ಸ್ವಾರ್ಥಕ್ಕಾಗಿ ಬೀದಿಗಿಳಿದಿಲ್ಲ, ಸಮಾಜಕ್ಕಾಗಿ ಬೀದಿಗೆ ಬಂದಿದ್ದಾರೆ. ಅವರನ್ನು ಗೌರವಿಸದ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಬೇಕು.

ಸ್ವರ್ಣ ಭಟ್, ಆಂದೋಲನದ ಸಂಚಾಲಕಿ

ಕುಡಿತ ಎಂಬುದು ರಾಷ್ಟ್ರೀಯ ದುರಂತ. ಅದು ಇಡೀ ದೇಶವನ್ನು ನಾಶದ ಕಡೆಗೆ ಕೊಂಡೊಯ್ಯುತ್ತದೆ. ಆದರೆ, ವಿಧಾನಸೌಧದಲ್ಲಿ ಕುಳಿತಿರುವ ಜನಪ್ರತಿನಿಧಿಗಳು ಮದ್ಯಪಾನ ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಚರ್ಚೆ ಮಾಡುತ್ತಾರೆ. ಏನಾದರೂ ಸಮಸ್ಯೆಗಳನ್ನು ತಂದಿಟ್ಟರು ಅದನ್ನು ಬಗೆಹರಿಸಲು ಅಸಾಧ್ಯ ಎನ್ನುತ್ತಾರೆ. ಇನ್ನೇಕೆ ಅಧಿಕಾರದಲ್ಲಿರಬೇಕು. ವಾರ್ಷಿಕ 18 ಸಾವಿರ ಕೋಟಿ ಮದ್ಯಪಾನದಿಂದ ವರಮಾನ ಬರುತ್ತದೆ ಎಂದು ಹೇಳುತ್ತಾರೆ. ಇದೇ ವೇಳೆ ಅದರ ಎರಡರಷ್ಟು ಮದ್ಯ ವ್ಯಸನಿಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸುತ್ತಿವೆ. ಇದು ದುರಂತವಲ್ಲವೇ..?

ಪ್ರಸನ್ನ, ಹಿರಿಯ ರಂಗಕರ್ಮಿ

ಸಾವಿರಾರು ಸಂಖ್ಯೆಯಲ್ಲಿ ನ್ಯಾಯಯುತವಾದ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಜಧಾನಿಗೆ ಬಂದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕುರಿತು ಗಂಭೀರವಾದ ಚಿಂತನೆ ನಡೆಸಬೇಕು. ಬಿಹಾರದಲ್ಲಿ ಈಗಾಗಲೇ ಮದ್ಯಪಾನ ನಿಷೇಧ ಮಾಡಲಾಗಿದೆ. ರಾಜ್ಯದ ಅಧಿಕಾರಿಗಳ ನಿಯೋಗ ಅಲ್ಲಿಗೆ ಹೋಗಿ ನೋಡಿಕೊಂಡು ಬಂದು ರಾಜ್ಯದಲ್ಲಿಯೂ ಅದನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಬೇಕು. ಇದನ್ನು ತ್ವರಿತವಾಗಿ ಮಾಡಬೇಕು.

-ಎಸ್.ಆರ್.ಹೀರೇಮಠ್, ಹೋರಾಟಗಾರ

ಸಚಿವರಿಗೆ ತರಾಟೆ

ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಬಳಿ ಮಾತುಕತೆಗೆ ತೆರಳಿದ್ದ ಸಚಿವ ಬಂಡೆಪ್ಪ ಕಾಶೆಂಪೂರ್‌ಗೆ ಯಾವ ವಿಷಯಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇರಲಿಲ್ಲ. ಹೀಗಾಗಿ, ನಿಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗೆ ತಲುಪಿಸುತ್ತೇನೆ ಎಂದು ಅಷ್ಟೇ ಹೇಳಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಮುಖ್ಯಮಂತ್ರಿಯೇ ಬಂದು ಆಶ್ವಾಸನೆ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News