ಗಾಂಧೀಜಿಯನ್ನು ಕೊಲೆಗೈದದ್ದು ಆರೆಸ್ಸೆಸ್‌ನವರು: ದೊರೆಸ್ವಾಮಿ

Update: 2019-01-30 15:41 GMT

ಬೆಂಗಳೂರು, ಜ.30: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಆರೆಸ್ಸೆಸ್‌ನವರೇ ಕೊಲೆಗೈದಿದ್ದು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಗಂಭೀರ ಆರೋಪ ಮಾಡಿದರು.

ಬುಧವಾರ ನಗರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ಬಾ-ಬಾಪು 150ನೇ ಜನ್ಮ ವರ್ಷಾಚರಣೆ ಸರ್ವೋದಯ ದಿನಾಚರಣೆ, ಕಾಲೇಜು ಪ್ರಾಧ್ಯಾಪಕರಿಗಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಅವರನ್ನು ಹತ್ಯೆಗೈಯುವ 15 ದಿನ ಮುಂಚೆಯೇ ನಾಥೂರಾಮ್ ಗೋಡ್ಸೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಆರೆಸ್ಸೆಸ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಂದಾಗ ಸ್ವಾಗತ ಸಮಿತಿಯ ಅಧ್ಯಕ್ಷರ ಮನೆಯಲ್ಲಿ ತಂಗಿದ್ದರು. ಈ ಬಗ್ಗೆ ನಾನು ನನ್ನ ಪತ್ರಿಕೆಯಲ್ಲಿ ವರದಿ ಕೂಡ ಮಾಡಿದ್ದೆ ಎಂದು ದೊರೆಸ್ವಾಮಿ ನೆನೆದರು.

ನಾಥೂರಾಮ್ ಗೋಡ್ಸೆಗೆ ಆರೆಸ್ಸೆಸ್ ಜೊತೆಗೆ ಸಂಬಂಧ ಇದೆ. ಆದರೆ, ಗೋಡ್ಸೆ ನಮ್ಮವನಲ್ಲ ಎಂದು ಸಂಘಪರಿವಾರ ಹೇಳುತ್ತದೆ ಎಂದ ಅವರು, ಈ ರೀತಿ ಕೃತ್ಯವೆಸಗಿದ ಗೋಡ್ಸೆಗೆ ದೇವಾಲಯ ನಿರ್ಮಿಸುವ ಜನರು ಇರುವುದು ಬೇಸರದ ಸಂಗತಿಯಾಗಿದ್ದು, ಇದರ ಹಿಂದೆ ಬಿಜೆಪಿಯವರ ಕೈವಾಡ ಇದೆ ಎಂದರು.

 ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೆ ಪಿ.ಕೃಷ್ಣ ಮಾತನಾಡಿ, ಗಾಂಧಿ ಹತ್ಯೆ ಇಂದಿಗೂ ನೋವುಂಟು ಮಾಡುತ್ತದೆ. ಹಂತಕ ಶಕ್ತಿಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಕೋಮುವಾದ, ಹಿಂಸಾತ್ಮಕ ಮನಸ್ಸುಗಳನ್ನು ಖಂಡಿಸಬೇಕು. ಜೊತೆಗೆ ಗಾಂಧೀಜಿ ಅವರ ತತ್ವಗಳನ್ನು ಎಲ್ಲೆಡೆ ಹರಡುವಂತೆ ಮಾಡಬೇಕೆಂದು ನುಡಿದರು.

8 ಕೃತಿಗಳ ಲೋಕಾರ್ಪಣೆ: ವೇಮುಗಲ್ ಸೋಮಶೇಖರ್ ವಿರಚಿತ ‘ಮಹದೇವ ದೇಸಾಯಿ’, ಗಾಂಧೀಜಿ ಅವರ ’ಖಾದಿ ಗ್ರಾಮೋದ್ಯೋಗ’, ‘ಹಾಸ್ಯ ಮತ್ತು ಗಾಂಧಿ’ ಸೇರಿದಂತೆ 8 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವೇಮಗಲ್ ಸೋಮಶೇಖರ್, ಹಿರಿಯ ಕರಡು ತಿದ್ದುಪಡಿಗಾರ ಎಸ್.ಕೆ.ಇಂದ್ರಕುಮಾರ್ ಅವರನ್ನು ಗೌರವಿಸಲಾಯಿತು. ಪಿಐಬಿ, ಆರ್‌ಓಬಿನ ಹೆಚ್ಚುವರಿ ಮಹಾ ನಿರ್ದೇಶಕ ಎಂ.ನಾಗೇಂದ್ರಸ್ವಾಮಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News