ನವ ಬೆಂಗಳೂರು ಅಭಿವೃದ್ಧಿಗೆ 8,015 ಕೋಟಿ ರೂ.ವೆಚ್ಚಕ್ಕೆ ಸಂಪುಟ ಸಮ್ಮತಿ
ಬೆಂಗಳೂರು, ಜ. 30: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಮುಂದಿನ ಮೂರು ವರ್ಷಗಳಲ್ಲಿ ‘ನವ ಬೆಂಗಳೂರು ಅಭಿವೃದ್ಧಿ ಯೋಜನೆ’ಯಡಿ 8,015 ಕೋಟಿ ರೂ.ವೆಚ್ಚ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಚಿವ ಕೃಷ್ಣಭೈರೇಗೌಡ, ಪ್ಲೈಓವರ್, ರಾಜಕಾಲುವೆ, ವೈಟ್ ಟಾಪಿಂಗ್, ಮೇಲ್ಸೇತುವೆಗಳ ನಿರ್ಮಾಣ ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಬಿಬಿಎಂಪಿ, ಬಿಡಿಎ, ಬಿಡಬ್ಲೂಎಸ್‌ಎಸ್‌ಬಿ, ಮೆಟ್ರೋ ಹೊರತುಪಡಿಸಿ ರಾಜ್ಯ ಸರಕಾರದಿಂದ ಬೆಂಗಳೂರಿನ ಅಭಿವೃದ್ಧಿ 8,015 ಕೋಟಿ ರೂ.ವೆಚ್ಚ ಮಾಡಲಾಗುವುದು ಎಂದ ಅವರು, ಬಿಬಿಎಂಪಿ, ಬಿಡಿಎ ಹಣವನ್ನು ಸೇರಿದಂತೆ ಒಟ್ಟು 18 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ನಗರದ ಅಭಿವೃದ್ಧಿಗೆ ವೆಚ್ಚ ಮಾಡಿದಂತೆ ಆಗುತ್ತದೆ ಎಂದರು.
ಕರ್ನಾಟಕ ಭವನ ನವೀಕರಣ: ದಿಲ್ಲಿಯ ಚಾಣಕ್ಯಪುರಿಯಲ್ಲಿನ ಹಳೆಯ ಕರ್ನಾಟಕ ಭವನ ಕಟ್ಟಡದ ಜಾಗದಲ್ಲೇ 78 ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆ ನೆಲಮಂಗಲದ ಟಿ.ಬೇಗೂರು ಮತ್ತು ತಿಪ್ಪಗೊಂಡನಹಳ್ಳಿಯಲ್ಲಿ ಒಟ್ಟು 18 ಎಕರೆ ವಸತಿಯೇತರ ಅಭಿವೃದ್ಧಿ(ಶೈಕ್ಷಣಿಕ ಸಂಸ್ಥೆ ಮತ್ತು ಆಸ್ಪತ್ರೆ)ಗೆ ಒಪ್ಪಿಗೆ ನೀಡಿದೆ.
ಗಣಿತ ಕೀಟ್: ಗ್ರಾಮೀಣ ಪ್ರದೇಶದ ಮಕ್ಕಳ ಗಣಿತ ಕಲಿಕೆಗೆ ಅನುಕೂಲ ಆಗುವಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಗಣಿತ ಕಲಿಕಾ ಆಂದೋಲನದ ಭಾಗವಾಗಿ ಗಣಿತ ಕಿಟ್‌ಗಳನ್ನು ವಿತರಣೆಗೆ ಸಮ್ಮತಿಸಲಾಗಿದೆ. ಸಿಎಂ ಅಧ್ಯಕ್ಷತೆಯಲ್ಲಿ ಕೇಂದ್ರದ ಸರ್ವ ಶಿಕ್ಷಾ ಅಭಿಯಾನ ಮತ್ತು ಮಾಧ್ಯಮ ಶಿಕ್ಷಣ ಅಭಿಯಾನವನ್ನು ವಿಲೀನಗೊಳಿಸಿ, ‘ಕರ್ನಾಟಕ ಸಮಗ್ರ ಶಿಕ್ಷಣ ಅಭಿಯಾನ’ ಆರಂಭಿಸಲು ಒಪ್ಪಿಗೆ ನೀಡಲಾಗಿದೆ.
ಸಿಲ್ಕ್ ಕ್ಲಸ್ಟರ್: ಮೈಸೂರಿನಲ್ಲಿ 49 ಕೋಟಿ ರೂ.ವೆಚ್ಚದಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್ ಸ್ಥಾಪಿಸಲು ಹಾಗೂ ಮೈಸೂರಿನ ಇಲವಾಲ ಹೋಬಳಿಯ ಬೆಳವಾಡಿಯಲ್ಲಿ 10 ಎಕರೆ ಭೂಮಿಯನ್ನು ವೆೆುಸೂರಿನ ಚಾಮುಂಡೇಶ್ವರಿ ಮೆಗಾ ಸಿಲ್ಕ್ ಕ್ಲಸ್ಟರ್ ಇಂಡಿಯಾ ಪ್ರೈ.ಲಿ.ಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಅನುಮೋದನೆ ನೀಡಲಾಗಿದೆ.
ವಿಜಯಪುರದ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ ಮತ್ತಿತರ 10 ಗ್ರಾಮಗಳಲ್ಲಿ 19 ಕೋಟಿ ರೂ.ವೆಚ್ಚದಲ್ಲಿ ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಿಗೆ 21 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.