×
Ad

ಯುವತಿಗಾಗಿ ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ

Update: 2019-01-30 22:03 IST

ಬೆಂಗಳೂರು, ಜ.30: ಯುವತಿ ವಿಚಾರವಾಗಿ ಕಾಲೇಜು ವಿದ್ಯಾರ್ಥಿಗಳಿಬ್ಬರ ನಡುವೆ ಜಗಳ ನಡೆದು ಚಾಕುವಿನಿಂದ ಇರಿದು ಒಬ್ಬನನ್ನು ಕೊಲೆ ಮಾಡಿರುವ ಘಟನೆ ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ರಾಮಯ್ಯ ಲೇಔಟ್ ನಿವಾಸಿ ದಯಾಸಾಗರ್(17) ಕೊಲೆಯಾದ ವಿದ್ಯಾರ್ಥಿ ಎಂದು ಪೊಲೀಸರು ಗುರುತಿಸಿದ್ದು, ರಕ್ಷಿತ್(18) ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಬಾಗಲಗುಂಟೆ ವ್ಯಾಪ್ತಿಯ 8ನೆ ಮೈಲಿಯಲ್ಲಿರುವ ಸೌಂದರ್ಯ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ದಯಾಸಾಗರ್ ಹಾಗೂ ರಕ್ಷಿತ್(18) ನಡುವೆ ಯುವತಿ ವಿಚಾರವಾಗಿ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ.

ಬುಧವಾರ ಬೆಳಗ್ಗೆ 8:30ರ ಸಮಯದಲ್ಲಿ ಇವರಿಬ್ಬರು ಕಾಲೇಜಿಗೆ ಬಂದಿದ್ದಾರೆ. ಈ ವೇಳೆ ಮತ್ತೆ ಯುವತಿ ವಿಚಾರವಾಗಿ ಇವರಿಬ್ಬರ ನಡುವೆ ಜಗಳವಾಗಿದೆ. ದಯಾಸಾಗರ್, ರಕ್ಷಿತ್ ಮೇಲೆ ಹಲ್ಲೆ ನಡೆಸಿದಾಗ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿದ್ದವರು ಜಗಳ ಬಿಡಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ದಯಾಸಾಗರ್ ಕಾಲೇಜು ಆವರಣದ ಶೌಚಾಲಯದ ಕಡೆ ಹೋಗುತ್ತಿದ್ದಾನೆ. ಕೆಲ ಸಮಯದ ಬಳಿಕ ರಕ್ಷಿತ್ ಸಹ ಹಿಂಬಾಲಿಸಿಕೊಂಡು ಹೋಗಿ ದಯಾಸಾಗರ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ದಯಾಸಾಗರ್ ಒದ್ದಾಡುತ್ತಿದ್ದುದನ್ನು ಗಮನಿಸಿದ ಕಾಲೇಜಿನ ವಿದ್ಯಾರ್ಥಿಗಳು ತಕ್ಷಣ ಸಿಬ್ಬಂದಿಗೆ ತಿಳಿಸಿದ್ದಾರೆ. ಬಳಿಕ, ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಮೃತ ದೇಹವನ್ನು ಸಪ್ತಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸುದ್ದಿ ತಿಳಿದ ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಆರೋಪಿ ರಕ್ಷಿತ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News