ಹಜ್‌ಯಾತ್ರೆ-2019: ರಾಜ್ಯದ ಕೋಟಾ 9 ಸಾವಿರಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಝಮೀರ್‌ಅಹ್ಮದ್ ಮನವಿ

Update: 2019-01-30 16:49 GMT

ಬೆಂಗಳೂರು, ಜ.30: 2011ರ ಜನಗಣತಿ ಆಧಾರದ ಮೇಲೆ ರಾಜ್ಯದಲ್ಲಿರುವ ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಹಜ್‌ಯಾತ್ರೆಯ ಕೋಟಾವನ್ನು 6701 ರಿಂದ 9 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ಅಹ್ಮದ್‌ಖಾನ್ ಮನವಿ ಮಾಡಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯನ್ನು ಭೇಟಿ ಮಾಡಿದ ಅವರು, ಈ ಹಿಂದೆ 2018ರ ಜೂ.29ರಂದು ತಮ್ಮನ್ನು ಭೇಟಿ ಮಾಡಿದ್ದ ವೇಳೆ ರಾಜ್ಯದ ಹಜ್ ಯಾತ್ರಿಗಳ ಕೋಟಾವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದನ್ನು ಸ್ಮರಿಸಿದರು.

ಆದರೆ, ಜನವರಿ 4ರಂದು ಭಾರತೀಯ ಹಜ್ ಸಮಿತಿ ಹೊರಡಿಸಿರುವ ಸುತ್ತೋಲೆಯನ್ನು ಗಮನಿಸಿದರೆ ಮೇಲ್ನೋಟಕ್ಕೆ ನಾವು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸದಿರುವುದು ಕಂಡು ಬರುತ್ತದೆ. 2011ರ ಜನಗಣತಿ ಆಧಾರದಲ್ಲಿ ನಮಗೆ ಕೋಟಾ ನಿಗದಿಪಡಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಕೇರಳ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯಕ್ಕೆ ಹಂಚಿಕೆಯಾಗಿರುವ ಹೆಚ್ಚುವರಿ ಸೀಟುಗಳ ಪ್ರಮಾಣವು ಕನಿಷ್ಠ ಮಟ್ಟದಲ್ಲಿದ್ದು, ನಮಗೆ ನ್ಯಾಯ ಸಿಕ್ಕಿಲ್ಲ. ಆದುದರಿಂದ, ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡಿ ಕೊಳ್ಳುವುದೇನೆಂದರೆ, ನಮಗೆ ನಮ್ಮ ಜನಸಂಖ್ಯೆಗೆ ಅನುಗುಣವಾಗಿ, ಈಗ ನಿಗದಿಪಡಿಸಿರುವ 6701 ಮಂದಿಯ ಕೋಟಾದಿಂದ 9 ಸಾವಿರ ಮಂದಿಗೆ ಹೆಚ್ಚಳ ಮಾಡಬೇಕು ಎಂದು ಝಮೀರ್‌ಅಹ್ಮದ್ ಮನವಿ ಮಾಡಿದರು.

ವಂಚಿತರಿಗೆ ಅವಕಾ: ಕಳೆದ ಸಾಲಿನ ಹಜ್‌ಯಾತ್ರೆ ಸಂದರ್ಭದಲ್ಲಿ ಬೆಂಗಳೂರಿನ ಖಾಸಗಿ ಟೂರ್ ಆಪರೇಟರ್ ಸಂಸ್ಥೆಯೊಂದು 136 ಮಂದಿ ಬಡವರಿಂದ ಯಾತ್ರೆಯ ಸಂಪೂರ್ಣ ಹಣವನ್ನು ಪಾವತಿಸಿಕೊಂಡು, ಅವರನ್ನು ಯಾತ್ರೆಗೆ ಕರೆದುಕೊಂಡು ಹೋಗದೆ ವಂಚಿಸಿದೆ. ಈ ಸಂಬಂಧ ಸಂಬಂಧಪಟ್ಟವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಎಫ್‌ಐಆರ್ ಆಗಿದೆ ಎಂದು ಅವರು ತಿಳಿಸಿದರು.

 ಪ್ರಸಕ್ತ ಸಾಲಿನಲ್ಲಿಯೂ 136 ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಕಡು ಬಡವರಾಗಿರುವ 31 ಮಂದಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ 60 ಮಂದಿ ಅರ್ಜಿ ಸಲ್ಲಿಸಿದ್ದರೂ ಆಯ್ಕೆಯಾಗಿಲ್ಲ. ಈ ಅಮಾಯಕರು ಯಾತ್ರೆಯಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಝಮೀರ್‌ಅಹ್ಮದ್ ಮನವಿ ಮಾಡಿದರು.

 ಪ್ರಧಾನಮಂತ್ರಿ ಜನ ವಿಕಾಸ್ ಯೋಜನೆಯಡಿಯಲ್ಲಿ ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ 60 ಕೋಟಿ ರೂ.ಗಳು ನಮ್ಮ ಗುರಿಯಿತ್ತು. ಕೇಂದ್ರ ಸರಕಾರದಿಂದ 100 ಕೋಟಿ ರೂ.ಗಳನ್ನು ನೀಡಲಾಗಿದೆ(ಹೆಚ್ಚುವರಿ 40 ಕೋಟಿ ರೂ.). ಹೊಸದಾಗಿ 90 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದಕ್ಕೆ ಅನುಮೋದನೆ ನೀಡುವಂತೆ ಅವರು ಮನವಿ ಮಾಡಿದರು.

ರಾಷ್ಟ್ರೀಯ ವಿದ್ಯಾರ್ಥಿ ವೇತನ ಪಡೆಯಲು ರಾಜ್ಯದ 14.50 ಲಕ್ಷ ಮಕ್ಕಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 3-4 ಲಕ್ಷ ಮಕ್ಕಳಿಗೆ ಕೇಂದ್ರ ಸರಕಾರದಿಂದ ವಿದ್ಯಾರ್ಥಿ ವೇತನ ಸಿಕ್ಕಿದೆ. ಇನ್ನುಳಿದಂತೆ ರಾಜ್ಯದ 11 ಲಕ್ಷ ಮಕ್ಕಳಿಗೆ ರಾಜ್ಯ ಸರಕಾರದ ವತಿಯಿಂದ ನೀಡಬೇಕು. ಇದಕ್ಕಾಗಿ 300 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಈಗಾಗಲೆ ಎರಡು ತಿಂಗಳು ವಿಳಂಬವಾಗಿದೆ. ಕೇಂದ್ರ ಸರಕಾರವು ತನ್ನ ಪಾಲನ್ನು ನೀಡಿದರೆ, ವಿದ್ಯಾರ್ಥಿಗಳಿಗೆ ತ್ವರಿತವಾಗಿ ವಿದ್ಯಾರ್ಥಿವೇತನ ಪಾವತಿಸಲು ಅನುಕೂಲವಾಗುತ್ತದೆ ಎಂದು ಝಮೀರ್‌ಅಹ್ಮದ್ ಹೇಳಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಅಕ್ರಮ್‌ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News