ಜಿದ್ದಾ: ಫ್ರೆಟರ್ನಿಟಿ ಫೆಸ್ಟ್ ಅಂಗವಾಗಿ ಜಿದ್ದಾದಲ್ಲಿ ಸಂಭ್ರಮದ ಕ್ರೀಡೋತ್ಸವ

Update: 2019-01-30 18:43 GMT

ಜಿದ್ದಾ,ಜ.30: ಇಂಡಿಯಾ ಫ್ರೆಟರ್ನಿಟಿ ಫೋರಮ್ ಕರ್ನಾಟಕ ಚಾಪ್ಟರ್ ಜಿದ್ದಾ ವಲಯದ ವತಿಯಿಂದ ಫ್ರೆಟರ್ನಿಟಿ ಫೆಸ್ಟ್ ಅಂಗವಾಗಿ ಕ್ರೀಡೋತ್ಸವ ಇತ್ತೀಚೆಗೆ ಜಿದ್ದಾದ ಶರಫಿಯಾದ ಹಿಲಾಲ್ ಶಾಮ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಅನಿವಾಸಿ ಕನ್ನಡಿಗರಿಗಾಗಿ ಏರ್ಪಡಿಸಿದ ಕ್ರೀಡಾಕೂಟದಲ್ಲಿ ಅನಿವಾಸಿ ಕನ್ನಡಿಗರು ಸಂತೋಷದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಪುರುಷರಿಗಾಗಿ ಕಬಡ್ಡಿ, ಹಗ್ಗಜಗ್ಗಾಟ, ಸೂಪರ್ ಓವರ್ ಕ್ರಿಕೆಟ್, ನೂರು ಮೀಟರ್ ಓಟ ಮತ್ತು ಕರ್ನಾಟಕದ ಜಾನಪದ ಕ್ರೀಡೆ ಲಗೋರಿ ಆಟವನ್ನು ಪ್ರಪ್ರಥಮ ಬಾರಿಗೆ ಸೌದಿ ಅರೇಬಿಯಾದಲ್ಲಿ ಏರ್ಪಡಿಸುವ ಮೂಲಕ ಇಂಡಿಯಾ ಫ್ರೆಟರ್ನಿಟಿ ಫೋರಮ್ ಅನಿವಾಸಿಗಳಿಗೆ ಮನರಂಜನೆಯ ರಸದೌತಣ ನೀಡಿತು.

ಮಕ್ಕಳಿಗಾಗಿ ಐವತ್ತು ಮೀಟರ್ ಓಟ, ಹಗ್ಗಜಗ್ಗಾಟ, ಬಲೂನ್ ಒಡೆಯುವ ಸ್ಪರ್ಧೆ ನಡೆಸಲಾಯಿತು. ನೂರು ಮೀಟರ್ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶೇಕ್ ಅಝನ್, ಮಕ್ಕಳ ಐವತ್ತು ಮೀಟರ್ ಓಟದಲ್ಲಿ ಅಸ್ಫರ್ ಗೂಡಿನಬಳಿ ಪ್ರಥಮ ಸ್ಥಾನ ಪಡೆದುಕೊಂಡರು. ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಎ ಟಿ ಎಸ್ ಜಿದ್ದಾ ಹಾಗು ದ್ವಿತೀಯ ಸ್ಥಾನವನ್ನು ಫಕ್ರ್ ಅಲ್ ಹಿಜಾಜ್ ತಂಡ ಪಡೆದುಕೊಂಡಿತು. ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಮ್ಯಾಕ್ಸ್ ಮಕ್ಕಾ, ದ್ವಿತೀಯ ಸ್ಥಾನ ಎಟಿ ಎಸ್ ತಂಡದ ಪಾಲಾಯಿತು. ಸೌದಿ ಅರೇಬಿಯಾದಲ್ಲಿ ಮೊದಲ ಬಾರಿ ಆಯೋಜಿಸಿದ ಲಗೋರಿ ಆಟದಲ್ಲಿ ಸನ್ ಶೈನ್ ಪ್ರಥಮ ಹಾಗು ಎನ್ ಜಿಸಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಇಂಡಿಯಾ ಫ್ರೆಟರ್ನಿಟಿ ಫೋರಮ್ ಜಿದ್ದಾ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಹಾರಿಸ್ ಗೂಡಿನಬಳಿ ಕ್ರೀಡಾ ಧ್ವಜವನ್ನು ಪಂದ್ಯಕೂಟದ ಕ್ಯಾಪ್ಟನ್ ಇಮ್ರಾನ್ ಬಜ್ಪೆಯವರಿಗೆ ಹಸ್ತಾಂತರಿಸುವ ಮೂಲಕ ಪಂದ್ಯಕೂಟಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ರೀಜನಲ್ ಪ್ರೆಸಿಡೆಂಟ್ ಜನಾಬ್ ಫಯಾಜ್ ಚೆನ್ನೈ, ಹಿದಾಯ ಫೌಂಡೇಶನ್ ಅಧ್ಯಕ್ಷ ಜನಾಬ್ ಜಾವೇದ್ ಕಲ್ಲಡ್ಕ, ಉದ್ಯಮಿಗಳಾದ ಇಸ್ಮಾಯಿಲ್ ಪುತ್ತ, ಲಿಯಾಖತ್ ಅಬ್ದುಲ್ ರಹಿಮಾನ್, ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ (ಪಶ್ಚಿಮ ಪ್ರಾಂತ್ಯ ಸೌದಿ ಅರೇಬಿಯಾ) ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐಎಫ್ ಎಫ್ ಜಿದ್ದಾ ಪ್ರಧಾನ ಕಾರ್ಯದರ್ಶಿ ಜನಾಬ್ ಆರಿಫ್ ಬಜ್ಪೆ ಸ್ವಾಗತಿಸಿ, ಐಎಫ್ ಎಫ್ ಜಿದ್ದಾ ವಲಯಾಧ್ಯಕ್ಷ ಮುದಸ್ಸಿರ್ ಅಕ್ಕರಂಗಡಿ ಧನ್ಯವಾದ ಸಮರ್ಪಿಸಿದರು. ಶಾಕಿರ್ ಹಕ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News