ಎರಡು ಮೆಲುಗಲ್ಲುಗಳ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ

Update: 2019-01-30 18:43 GMT

ಹ್ಯಾಮಿಲ್ಟನ್, ಜ.30: ನ್ಯೂಝಿಲೆಂಡ್ ವಿರುದ್ದ ಗುರುವಾರ ಇಲ್ಲಿ ನಡೆಯುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮಾ ಎರಡು ಮೈಲುಗಲ್ಲು ಸ್ಥಾಪಿಸುವ ನಿರೀಕ್ಷೆಯಲ್ಲಿದ್ದಾರೆ.

ಗುರುವಾರ 200ನೇ ಏಕದಿನ ಪಂದ್ಯವನ್ನಾಡ ಲಿರುವ ರೋಹಿತ್ ಈಗಾಗಲೇ ಏಕದಿನ ಪಂದ್ಯದಲ್ಲಿ ಒಟ್ಟು 215 ಸಿಕ್ಸರ್‌ಗಳನ್ನು ಸಿಡಿಸಿ ವಿಕೆಟ್‌ಕೀಪರ್-ದಾಂಡಿಗ ಎಂ.ಎಸ್. ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರೂ ದಾಂಡಿಗರಿಗೆ ಇನ್ನಷ್ಟು ಸಿಕ್ಸರ್ ಸಿಡಿಸುವ ಅವಕಾಶವಿದೆ. ಭಾರತದ ಪರ ಇನಿಂಗ್ಸ್ ಆರಂಭಿಸಲಿರುವ ರೋಹಿತ್‌ಗೆ ವಿಪುಲ ಅವಕಾಶವಿದೆ.

ರೋಹಿತ್ 4ನೇ ಪಂದ್ಯದಲ್ಲಿ ಶತಕ ದಾಖಲಿಸಿದರೆ ನ್ಯೂಝಿಲೆಂಡ್ ನೆಲದಲ್ಲಿ ಶತಕ ಸಿಡಿಸಿದ ಭಾರತದ ಮೊತ್ತ ಮೊದಲ ನಾಯಕನಾಗಿ ದಾಖಲೆ ಬರೆಯಲಿದ್ದಾರೆ. ಧೋನಿ 2015ರಲ್ಲಿ ಝಿಂಬಾಬ್ವೆ ವಿರುದ್ಧ ಆಕ್ಲಂಡ್‌ನಲ್ಲಿ ಔಟಾಗದೆ 85 ರನ್ ಗಳಿಸಿದ್ದರು. ಇದು ನ್ಯೂಝಿಲೆಂಡ್‌ನಲ್ಲಿ ಭಾರತದ ನಾಯಕನೊಬ್ಬನ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.

ರೋಹಿತ್ ತಂಡವನ್ನು ನಾಯಕನಾಗಿ ಮುನ್ನಡೆಸಿದ ಸಂದರ್ಭದಲ್ಲಿ ಅವರ ಬ್ಯಾಟಿಂಗ್ ಸರಾಸರಿ 102.8ಕ್ಕೆ ಜಿಗಿದಿತ್ತು. ರೋಹಿತ್ 8 ಏಕದಿನಗಳಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಿದ್ದು ಎರಡು ಅರ್ಧಶತಕ ಹಾಗೂ ಒಂದು ದ್ವಿಶತಕ ಸಹಿತ ಎರಡು ಶತಕ ಸಿಡಿಸಿದ್ದರು.

ಪ್ರಸಕ್ತ ಸರಣಿಯಲ್ಲಿ ರೋಹಿತ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. 3 ಪಂದ್ಯಗಳಲ್ಲಿ ಒಟ್ಟು 160 ರನ್ ಗಳಿಸಿ ಸರಣಿಯಲ್ಲಿ ದ್ವಿತೀಯ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಸರಣಿಯ ಕಳೆದೆರಡು ಪಂದ್ಯಗಳಲ್ಲಿ ಕ್ರಮವಾಗಿ 87 ಹಾಗೂ 62 ರನ್ ಗಳಿಸಿದ್ದಾರೆ. ‘ಹಿಟ್‌ಮ್ಯಾನ್’ಖ್ಯಾತಿಯ ರೋಹಿತ್ 4ನೇ ಪಂದ್ಯದಲ್ಲಿ ಶತಕ ಗಳಿಸುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News