ಫಿಕ್ಸಿಂಗ್ ಕುರಿತು ಬಿಸಿಸಿಐಗೆ ಮಾಹಿತಿ ನೀಡಲಿಲ್ಲವಕೆ?

Update: 2019-01-30 18:57 GMT

ಹೊಸದಿಲ್ಲಿ, ಜ.30: 2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ತನ್ನನ್ನು ಸಂಪರ್ಕಿಸಿದಾಗ ತಕ್ಷಣವೇ ಬಿಸಿಸಿಐ ಗಮನಕ್ಕೆ ತಂದಿರಲಿಲ್ಲವೇಕೆ? ಎಂದು ನಿಷೇಧಿತ ಕ್ರಿಕೆಟಿಗ ಎಸ್.ಶ್ರೀಶಾಂತ್‌ಗೆ ಸುಪ್ರೀಂಕೋರ್ಟ್ ಬುಧವಾರ ಪ್ರಶ್ನಿಸಿದೆ. ಸೂಕ್ಷ್ಮ ಪ್ರಕರಣವಾದ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದಲ್ಲಿ ಆಜೀವ ನಿಷೇಧ ಎದುರಿಸುತ್ತಿರುವ ಶ್ರೀಶಾಂತ್‌ರ ನಡವಳಿಕೆ ಇಡೀ ಪ್ರಕರಣದಲ್ಲಿ ಉತ್ತಮವಾಗಿಲ್ಲ ಎಂಬ ಅಂಶವನ್ನು ಉಚ್ಚ ನ್ಯಾಯಾಲಯ ಗಮನಿಸಿದೆ.

 ಶ್ರೀಶಾಂತ್, ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ 2015ರಲ್ಲಿ ಕ್ರಿಮಿನಲ್ ಕೇಸ್‌ನಿಂದ ವಿಚಾರಣಾ ನ್ಯಾಯಾಲಯದಿಂದ ದೋಷಮುಕ್ತವಾಗಿದ್ದರು. ಬಿಸಿಸಿಐ ಶ್ರೀಶಾಂತ್ ಮೇಲೆ ವಿಧಿಸಿರುವ ಆಜೀವ ನಿಷೇಧ ಕ್ರೂರ ಕ್ರಮವಾಗಿದೆ. ಅವರು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಾಬೀತುಪಡಿಸಲು ಸರಿಯಾದ ಪುರಾವೆಯಿಲ್ಲ ಎಂದು ಜಸ್ಟಿಸ್ ಅಶೋಕ್ ಭೂಷಣ್ ಹಾಗೂ ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠದ ಮುಂದೆ ಶ್ರೀಶಾಂತ್ ಪರ ವಕೀಲರು ವಾದ ಮಂಡಿಸಿದರು.

ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಬಿಸಿಸಿಐ ತನ್ನ ಮೇಲೆ ವಿಧಿಸಿರುವ ಆಜೀವ ನಿಷೇಧವನ್ನು ಎತ್ತಿ ಹಿಡಿದ ತೀರ್ಪನ್ನು ಪ್ರಶ್ನಿಸಿ 35ರ ಹರೆಯದ ಕ್ರಿಕೆಟಿಗ ಶ್ರೀಶಾಂತ್,ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರೀಶಾಂತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, 2013ರ ಮೇನಲ್ಲಿ ಮೊಹಾಲಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿರುವ ಬಗ್ಗೆ ಸಾಬೀತಾಗಿಲ್ಲ. ಫಿಕ್ಸಿಂಗ್ ಮಾಡಲು ಆಟಗಾರ ಹಣ ಸ್ವೀಕರಿಸಿದ ಬಗ್ಗೆ ಪುರಾವೆಯೂ ಇಲ್ಲ ಎಂದರು.

 ಬುಕ್ಕಿಗಳ ನಡುವಿನ ದೂರವಾಣಿ ಸಂಭಾಷಣೆಯ ಧ್ವನಿಮುದ್ರಣವನ್ನು ಖುರ್ಷಿದ್ ಉಲ್ಲೇಖಿಸಿದರು. ‘‘ನೀವು(ಶ್ರೀಶಾಂತ್) ಈ ಕುರಿತು ಬಿಸಿಸಿಐಗೆ ತಕ್ಷಣವೇ ಮಾಹಿತಿ ನೀಡಿಲ್ಲವೇಕೆ?. ಇವೆಲ್ಲವೂ ಅವರ(ಶ್ರೀಶಾಂತ್) ವರ್ತನೆಯನ್ನು ಬೆಟ್ಟು ಮಾಡುತ್ತವೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು.

ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿ ಶ್ರೀಶಾಂತ್ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಲು ವಿಫಲರಾಗಿದ್ದು ನಿಜ ಎಂದ ಹಿರಿಯ ವಕೀಲ ಖುರ್ಷಿದ್, ಶ್ರೀಶಾಂತ್ ಮಾಹಿತಿ ನೀಡದ ತಪ್ಪಿಗೆ ಗರಿಷ್ಠ ಐದು ವರ್ಷ ನಿಷೇಧ ಹೇರಬೇಕಾಗಿತ್ತು ಎಂದರು. ಇಂತಹ ಚಟುವಟಿಕೆಯಲ್ಲಿ ಭಾಗಿಯಾದ ಕ್ರಿಕೆಟಿಗರ ಪೈಕಿ 2002ರಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟ ದ.ಆಫ್ರಿಕದ ಹ್ಯಾನ್ಶಿ ಕ್ರೊನಿಯೆ ಹೊರತುಪಡಿಸಿ ವಿಶ್ವದ ಯಾವೊಬ್ಬ ಆಟಗಾರನಿಗೂ ಆಜೀವ ನಿಷೇಧ ಹೇರಿಲ್ಲ. 2000ರಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದ ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್‌ಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. 2012ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನಿಷೇಧವನ್ನು ವಾಪಸ್ ಪಡೆದಿತ್ತು ಎಂಬ ಅಂಶವನ್ನು ವಕೀಲ ಖುರ್ಷಿದ್ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News