ಲೋಕಸಭಾ ಚುನಾವಣೆ ಹಳೆ ಮೈಸೂರು ಭಾಗದ ಮುಖಂಡರೊಂದಿಗೆ ಚರ್ಚೆ: ದಿನೇಶ್‌ಗುಂಡೂರಾವ್

Update: 2019-01-31 15:21 GMT

ಬೆಂಗಳೂರು, ಜ.31: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ, ಹಾಸನ, ಮೈಸೂರು ಭಾಗದ ಮಾಜಿ ಶಾಸಕರು, ಮುಖಂಡರೊಂದಿಗೆ ಆಯಾ ಜಿಲ್ಲೆಯ ರಾಜಕಾರಣ ಹಾಗೂ ವಸ್ತು ಸ್ಥಿತಿಗಳ ಬಗ್ಗೆ ಇಂದು ಚರ್ಚೆ ನಡೆಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಳೆ ಮೈಸೂರು ಭಾಗದ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿದ್ದು, ಮುಖಂಡರ ಅಭಿಪ್ರಾಯಗಳನ್ನು ಕೇಳಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು ಅತೀ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ದೇಶದಲ್ಲಿ ಸರಕಾರವನ್ನು ಬದಲಾಯಿಸಿ, ರಾಹುಲ್‌ಗಾಂಧಿಯನ್ನು ಪ್ರಧಾನಿ ಮಾಡಬೇಕೆಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡುವ ಕುರಿತು ಮುಕ್ತವಾಗಿ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಡುತ್ತಿದ್ದ ಕ್ಷೇತ್ರಗಳಾದ ಮಂಡ್ಯ, ಹಾಸನ, ಮೈಸೂರು ಹಾಗೂ ತುಮಕೂರಿನಲ್ಲಿ ನಮ್ಮ ಪಕ್ಷದ ಸಂಘಟನೆ ಯಾವ ರೀತಿ ಇರಬೇಕು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಯಾವ ರೀತಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಜೊತೆಗೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುವ ಬಗ್ಗೆ ಚರ್ಚಿಸಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ರಾಜ್ಯದಲ್ಲಿ ಮೈತ್ರಿ ಸರಕಾರವಿದೆ. ಜೊತೆಗೆ, ದೇಶದ ರಾಜಕಾರಣವನ್ನು ಗಮನಿಸಬೇಕು. ನಾವು ಹಾಗೂ ಜೆಡಿಎಸ್‌ನವರು ಪರಸ್ಪರ ಒಬ್ಬರ ವಿರುದ್ಧ ಮತ್ತೊಬ್ಬರು ಚುನಾವಣೆಗಳನ್ನು ಮಾಡಿರುವುದರಿಂದ, ಸ್ಥಳೀಯ ಮಟ್ಟದಲ್ಲಿ ಪೈಪೋಟಿ ಇರುವುದು ಸಹಜ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮುಖಂಡರು ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಮ್ಮ ಪಕ್ಷದ 10 ಸಂಸದರು, ಜೆಡಿಎಸ್ ಪಕ್ಷದ ಇಬ್ಬರು ಸಂಸದರಿದ್ದಾರೆ. ಇನ್ನುಳಿದ 16 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ಸಂಬಂಧ ಯಾವ ರೀತಿಯಲ್ಲಿ ಕೆಲಸ ಮಾಡಬೇಕು. ಇಲ್ಲಿ ಪ್ರತಿಷ್ಠೆ, ಸಂಖ್ಯೆಯ ವಿಚಾರವಲ್ಲ. ಯಾರಿಗೆ ಯಾವ ಕ್ಷೇತ್ರ ಗೆಲ್ಲಲು ಹೆಚ್ಚು ಅವಕಾಶಗಳಿವೆ ಎಂಬುದನ್ನು ನೋಡಿ, ಉಭಯ ಪಕ್ಷಗಳ ಮುಖಂಡರು ಸೀಟು ಹಂಚಿಕೆ ಕುರಿತು ತೀರ್ಮಾನ ಮಾಡುತ್ತೇವೆ ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.

ಫೆ.6ರಂದು ಕೆಪಿಸಿಸಿ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ. ಜೊತೆಗೆ, ವಿಧಾನಮಂಡಲದ ಅಧಿವೇಶನವು ಆರಂಭಗೊಳ್ಳಲಿದೆ. ಜಂಟಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗುವುದು. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಲೋಕಸಭೆಯ ಸೀಟುಗಳ ಕುರಿತು ಚರ್ಚೆ ಆರಂಭಿಸುತ್ತೇವೆ ಎಂದು ಅವರು ಹೇಳಿದರು.

ಬಹಿರಂಗ ಹೇಳಿಕೆಗಳನ್ನು ನೀಡದಂತೆ ನಿರ್ದೇಶನ

 ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಒಬ್ಬರ ವಿರುದ್ಧ ಮತ್ತೊಬ್ಬರು ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಬಾರದು. ಏನೇ ವಿಷಯಗಳಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡುವಂತೆ ನಮ್ಮ ಪಕ್ಷದ ಶಾಸಕರು, ಮುಖಂಡರಿಗೆ ಸೂಚಿಸಲಾಗಿದೆ. ಜೆಡಿಎಸ್‌ನವರು ಇದನ್ನು ಪಾಲನೆ ಮಾಡಬೇಕು. ಈ ಹಿಂದೆ ನಡೆದಿರುವ ಎಲ್ಲ ವಿಚಾರಗಳನ್ನು ಮರೆತು, ನಾವು ಒಂದಾಗಿ ಹೋಗಬೇಕು.

-ದಿನೇಶ್‌ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News