ರಾಜ್ಯಾದ್ಯಂತ ಗೋಡ್ಸೆ ಪ್ರತಿಕೃತಿ ನೇಣುಕಂಬಕ್ಕೆ ಏರಿಸಲು ಎಸ್‌ಡಿಪಿಐ ಕರೆ

Update: 2019-01-31 15:27 GMT

ಬೆಂಗಳೂರು, ಜ.31: ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಗೋಡ್ಸೆಯ ಪ್ರತಿಕೃತಿಯನ್ನು ನೇಣುಕಂಬಕ್ಕೆ ಏರಿಸಿ ಪ್ರತಿಭಟಿಸಲು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರೆ ನೀಡಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯಾದಿನವಾದ ಜನವರಿ 30 ರಂದು ಗಾಂಧೀಜಿಯ ಸಿದ್ಧಾಂತ, ಸಂದೇಶ, ತ್ಯಾಗದ ಬಗ್ಗೆ ದೇಶ ದೇಶಗಳಲ್ಲಿ ಸ್ಮರಣೆ ನಡೆಯುತ್ತಿರುವ ಸಂದರ್ಭದಲ್ಲಿ ದೇಶಕ್ಕೆ ಅವಮಾನವಾಗುವಂತಹ ಘಟನೆ ನಡೆದಿರುವುದು ವಿಪರ್ಯಾಸವಾಗಿದೆ ಎಂದು ತಿಳಿಸಿದೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹಾಗೂ ಇತರ ಅವರ ಸಹ ಕಾರ್ಯಕರ್ತರು ನಕಲಿ ಬಂದೂಕಿನಿಂದ ರಾಷ್ಟ್ರಪಿತ ಗಾಂಧೀಜಿಯ ಪ್ರತಿಕೃತಿಗೆ ಗುಂಡಿಕ್ಕಿ ಹತ್ಯೆ ಮಾಡುವ ಮೂಲಕ ಮಹಾತ್ಮ ಗಾಂಧೀಜಿ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸಿದೆ.

ಹತ್ಯಾ ದಿನವನ್ನು ಶೌರ್ಯ ದಿನವೆಂದು ಆಚರಿಸಿ ಸಿಹಿತಿಂಡಿ ಹಂಚಿ ಗಾಂಧೀಜಿಯನ್ನು ಹತ್ಯೆಗೈದ ಹಂತಕ ಗೋಡ್ಸೆಯ ಪ್ರತಿಕೃತಿಗೆ ಮಾಲಾರ್ಪಣೆ ಮಾಡುವ ಮೂಲಕ ದೇಶದ ಪ್ರಥಮ ಭಯೋತ್ಪಾದನಾ ಕೃತ್ಯವನ್ನು ಮತ್ತೊಮ್ಮೆ ಬೆಂಬಲಿಸಿರುವ ಮತ್ತು ಭಯೋತ್ಪಾದನಾ ಕೃತ್ಯವನ್ನು ನಡೆಸುವಂತೆ ಪರೋಕ್ಷವಾಗಿ ಕರೆ ನೀಡಿರುವ ಘಟನೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.

ದೇಶವೇ ತಲೆ ತಗ್ಗಿಸುವಂತಹ ಈ ಘಟನೆಯ ಬಗ್ಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕ ರಾಜ್ಯ ಸಮಿತಿಯು ‘ಗೋಡ್ಸೆಯ ಮರುಜನ್ಮ ಅನುಮತಿಸಲಾರೆವು’ ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆಯ ಪ್ರತಿಕೃತಿಯನ್ನು ನೇಣುಕಂಬಕ್ಕೆ ಏರಿಸುವ ಮೂಲಕ ಎಲ್ಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News