ವಿವಿ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡದಂತೆ ಎಬಿವಿಪಿ ಆಗ್ರಹ

Update: 2019-01-31 16:03 GMT

ಬೆಂಗಳೂರು, ಜ.31: ರಾಜ್ಯ ಸರಕಾರ ಜಾರಿಗೆ ಮುಂದಾಗಿರುವ ವಿಶ್ವವಿದ್ಯಾಲಯಗಳ ತಿದ್ದುಪಡಿ ಕಾಯ್ದೆ 2017ಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು ಎಂದು ಪ್ರಾಧ್ಯಾಪಕರು, ಪ್ರಾಂಶುಪಾಲರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಆಗ್ರಹಿಸಿದ್ದಾರೆ.

ಗುರುವಾರ ನಗರದ ಶಿಕ್ಷಕರ ಸದನದಲ್ಲಿ ಎಬಿವಿಪಿ ಸಂಘಟನೆಯಿಂದ ಆಯೋಜಿಸಿದ್ದ ಕರ್ನಾಟಕ ಉನ್ನತ ಶಿಕ್ಷಣದ ಒಂದು ಅವಲೋಕನ ಕುರಿತ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅನೇಕರು ‘ಸರಕಾರ ತರಲು ಮುಂದಾಗಿರುವ ಈ ಕಾಯ್ದೆಯಲ್ಲಿ ಹಲವು ಲೋಪದೋಷಗಳಿಂದ ಕೂಡಿದೆ. ಹೀಗಾಗಿ, ರಾಜ್ಯಪಾಲರು ಇದಕ್ಕೆ ಅಂಗೀಕಾರ ನೀಡಬಾರದು ಎಂದರು.

ರಾಜ್ಯ ಸರಕಾರವು ವಿಶ್ವವಿದ್ಯಾಲಯದ ತಿದ್ದುಪಡಿ ಮಸೂದೆಯಲ್ಲಿರುವ ಅಂಶಗಳು ಶೈಕ್ಷಣಿಕ ಕ್ಷೇತ್ರದ ಮೇಲೆ ವಿವಿಧ ಹಂತಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ, ಈ ಮಸೂದೆ ಜಾರಿಯಾದರೆ ವಿಶ್ವವಿದ್ಯಾಲಯಗಳು ಸ್ವಾಯತ್ತತೆ ಕಳೆದುಕೊಳ್ಳಲಿವೆ. ಜತೆಗೆ ಎಲ್ಲದರಲ್ಲೂ ಕೇಂದ್ರೀಯ ವ್ಯವಸ್ಥೆ ಜಾರಿ ಮಾಡುವ ಮೂಲಕ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿಬಂದಿತು.

ವಿಶ್ವವಿದ್ಯಾಲಯಗಳು ವಿಭಿನ್ನವಾಗಿ ಕೆಲಸ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಸ್ವತಂತ್ರವಿಲ್ಲದೆ ಯಾವ ರೀತಿ ಭಿನ್ನವಾಗಿರಲು ಸಾಧ್ಯವಾಗುತ್ತದೆ. ಅಲ್ಲದೆ, ಈ ಮಸೂದೆ ಅಡಿಯಲ್ಲಿ ಯುಜಿಸಿ ನಿಯಾಮಾವಳಿಗಳನ್ನು ಸಡಿಲಿಕೆ ಮಾಡಲು ಶಿಫಾರಸ್ಸಿದೆ. ಹೀಗಾಗಿ, ಇದನ್ನು ಎಲ್ಲರೂ ವಿರೋಧಿಸಬೇಕಿದೆ. ಈ ಸಂಬಂಧ ರಾಜ್ಯಪಾಲರಿಗೆ ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಲಿದ್ದೇವೆ ಎಂದು ಸಭೆ ನಿರ್ಣಯ ಅಂಗೀಕರಿಸಿತು.

ವಿವಿ ಮಟ್ಟದಲ್ಲಿನ ಸಮಸ್ಯೆಗಳ ಕುರಿತು ಸಿಂಡಿಕೇಟ್ ಸದಸ್ಯರು, ಉಪಕುಲಪತಿಗಳು ಹಾಗೂ ರಿಜಿಸ್ಟ್ರಾರ್‌ಗಳೊಂದಿಗೆ ಚರ್ಚೆಗಳನ್ನು ನಡೆಸುವ ಮೂಲಕ ಬಗೆಹರಿಸುವ ಪ್ರಯತ್ನ ಮಾಡಬೇಕು. ಹೀಗಾದರೆ, ವಿವಿಗಳು ಮತ್ತಷ್ಟು ಬಲಿಷ್ಠವಾಗಲು ಸಾಧ್ಯವಾಗುತ್ತದೆ. ಇನ್ನು ಶೈಕ್ಷಣಿಕ ಕ್ಷೇತ್ರದ ತಜ್ಞರು ಸುಮ್ಮನಿರುವುದರಿಂದ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದು, ಅವರು ಧ್ವನಿ ಎತ್ತಬೇಕು ಎಂದು ಸಭೆ ಕರೆ ನೀಡಿದೆ.

ವಿಟಿಯು ಮಾಜಿ ಉಪಕುಲಪತಿ ಬಲವೀರರೆಡ್ಡಿ ಮಾತನಾಡಿ, ರಾಜ್ಯದಲ್ಲಿನ ಹಲವು ವಿಶ್ವವಿದ್ಯಾಲಯಗಳು ಕಳೆದ 20 ವರ್ಷಗಳ ಹಿಂದೆ ರಾಷ್ಟ್ರದಲ್ಲಿಯೇ ಅತ್ಯುತ್ತಮ ಸ್ಥಾನವನ್ನು ಪಡೆದಿದ್ದವು. ಆದರೆ, ಈಗ ಅತ್ಯುತ್ತಮ ವಿವಿಗಳ ಪಟ್ಟಿಗೆ ಯಾವುದೊಂದು ವಿವಿಯೂ ಸೇರ್ಪಡೆಯಾಗುತ್ತಿಲ್ಲ. ಇಂದು ಉನ್ನತ ಶಿಕ್ಷಣ ಅಪಾರ ಪ್ರಮಾಣದಲ್ಲಿ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ವಿಧಾನಪರಿಷತ್ ಸದಸ್ಯ ಎಂ.ಕೆ.ಶ್ರೀಧರ್ ಮಾತನಾಡಿ, ಇಂದಿನ ಶಿಕ್ಷಣ ಯಾರಿಗಾಗಿ ಇದೆ ಎಂದು ಅರ್ಥವಾಗುತ್ತಿಲ್ಲ. ಸಚಿವರಿಗೆ, ಸರಕಾರಕ್ಕೆ ಅಥವಾ ವಿದ್ಯಾರ್ಥಿಗಳಿಗಾ ಎಂದ ಅವರು, ರಾಜ್ಯದಲ್ಲಿ ಸಮಗ್ರವಾದ ಶಿಕ್ಷಣ ನೀತಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲೆಡೆ ಚರ್ಚೆಯಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವ ತಮಗೆ ಮನಸಿಗೆ ತೋಚಿದ್ದನ್ನು ಎಲ್ಲ ಕಡೆ ಹೇಳಿಕೆಗಳನ್ನು ಕೊಡುತ್ತಿದ್ದು, ಅದರಲ್ಲಿ ಅವರಿಗೆ ಸ್ಪಷ್ಟತೆ ಹಾಗೂ ಗುರಿ ಯಾವುದೂ ಇಲ್ಲ. ಹೀಗಾಗಿ, ಸಾರ್ವಜನಿಕ ಚರ್ಚೆಯಾಗಿ, ಸಮಗ್ರವಾದ ಶಿಕ್ಷಣ ನೀತಿ ಜಾರಿ ಮಾಡಲಿ. ಅದುವರೆಗೂ ಅವರು ಇಷ್ಟ ಬಂದಂತೆ ಹೇಳಿಕೆ ನೀಡಬಾರದು. ಚುನಾವಣೆ ಹತ್ತಿರವಾಗುತ್ತಿದ್ದು, ಈ ಸಂದರ್ಭದಲ್ಲಿ ನಾವೆಲ್ಲ ರಾಜಕೀಯ ಪಕ್ಷಗಳನ್ನೂ ಈ ಕುರಿತು ಪ್ರಶ್ನಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಅರುಣ್ ಶಾಪುರ್, ರಾಜೀವ್‌ಗಾಂಧಿ ವಿವಿ ಮೆಡಿಸನ್ ವಿತರಣಾ ವಿಭಾಗದ ಡೀನ್ ರಾಮಚಂದ್ರಶೆಟ್ಟಿ, ಮಾಜಿ ಪರಿಷತ್ ಸದಸ್ಯ ಪಿ.ವಿ.ಕೃಷ್ಣಭಟ್, ಬಳ್ಳಾರಿ ವಿವಿ ಸಿಂಡಿಕೇಟ್ ಸದಸ್ಯ ಬಸವನಗೌಡ, ವಸಂತಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News