ಆಪರೇಷನ್ ಕಮಲದಿಂದ ಮೈತ್ರಿ ಸರಕಾರ ಮತ್ತಷ್ಟು ಬಲಿಷ್ಠ: ಜಿ.ಟಿ.ದೇವೇಗೌಡ

Update: 2019-01-31 16:06 GMT

ಬೆಂಗಳೂರು, ಜ.31: ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಮೈತ್ರಿ ಸರಕಾರವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಗುರುವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಏಳನೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಬಿನ್ನಮತೀಯ ಶಾಸಕರನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ನಾಯಕರು ಒಳ್ಳೆಯ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆಂದು ತಿಳಿಸಿದರು.

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಮುಖ್ಯಮಂತ್ರಿಯಷ್ಟೆ. ಆದರೆ, ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಆರು ಕೋಟಿ ಜನತೆಗೆ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಕೆಲವು ಕಾಂಗ್ರೆಸ್ ಶಾಸಕರ ಹೇಳಿಕೆಗಳಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಇರುಸು ಮುರುಸು ಆಗಿರುವುದು ನಿಜ. ಇಂತಹ ಶಾಸಕರ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಮೈತ್ರಿ ಸರಕಾರದ ಬಹುತೇಕ ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡಿದ್ದೇವೆ. ಈ ಬಗ್ಗೆ ಜೆಡಿಎಸ್ ಶಾಸಕರಿಗಾಗಲಿ, ಕಾರ್ಯಕರ್ತರಿಗಾಗಲಿ ಯಾವುದೆ ಅಸೂಯೆ ಇಲ್ಲ. ಆದಾಗ್ಯು ಕೆಲ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಕಾರ್ಯವೈಖರಿಯ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲವೆಂದು ಅವರು ಹೇಳಿದರು.

ಎಲ್ಲ ತ್ಯಾಗಕ್ಕೂ ಸಿದ್ಧ: ಮೈತ್ರಿ ಸರಕಾರದ ಉಳಿವಿಗಾಗಿ ಹಾಗೂ ರಾಜ್ಯದ ಜನತೆಗಾಗಿ ಜೆಡಿಎಸ್‌ನ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರು ಯಾವುದೆ ತ್ಯಾಗಕ್ಕೂ ಸಿದ್ಧವಾಗಿದ್ದೇವೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರಕ್ಕೆ ಯಾವುದೆ ಅಪಾಯವಿಲ್ಲವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News