ದೇಶದಲ್ಲಿ ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ ಬಿಜೆಪಿ ವಿರುದ್ಧ ಯಾರಿಗಾದರೂ ಮತ ಹಾಕಿ: ಪಿ.ಜಿ.ಆರ್.ಸಿಂಧ್ಯಾ

Update: 2019-01-31 16:11 GMT

ಬೆಂಗಳೂರು, ಜ.31: ದೇಶದಲ್ಲಿ ಕಾರ್ಮಿಕ ಕಾನೂನುಗಳು ರಕ್ಷಣೆ ಆಗಬೇಕೆಂದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಮತ ಹಾಕುವಂತಹ ಮಹತ್ವವಾದ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಅಭಿಪ್ರಾಯಿಸಿದರು.

ಗುರುವಾರ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್‌ ಸೆಂಟ್ರಲ್ ಯೂನಿಯನ್ ನಗರದ ಪುರಭವನದ ಮುಂಭಾಗ ಕೇಂದ್ರ ಸರಕಾರದ ಕಾರ್ಮಿಕ ವಿರೋಧ ನೀತಿಯನ್ನು ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾರ್ಮಿಕ ಪರವಾಗಿರುವ ಕಾನೂನನ್ನು ದುರ್ಬಲಗೊಳಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಜನಪರವಾದ ನಿಯಮಗಳನ್ನು ಬದಲಿಸಲಾಗುತ್ತಿದೆ. ಇದರಿಂದಾಗಿ ದೇಶದ ಕಾರ್ಮಿಕರು ಕನಿಷ್ಠ ಮಟ್ಟದ ಜೀವನ ನಡೆಸುವುದಕ್ಕೂ ಕಷ್ಟಪಡಬೇಕಾಗಿದೆ. ಹೀಗಾಗಿ ದೇಶದ ಕಾರ್ಮಿಕರು ಒಗ್ಗಟ್ಟಾಗಿ ಮುಂದಿನ ಚುನಾವಣೆಯ ಬಿಜೆಪಿಗೆ ತಕ್ಕಪಾಠ ಕಲಿಸಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಮಿಕರು ತಮ್ಮ ಬೆವರು-ರಕ್ತವನ್ನು ಸುರಿಸಿ ಕೂಡಿಟ್ಟಿರುವ ಭವಿಷ್ಯ ನಿಧಿ(ಪಿಎಫ್) ಹಣವನ್ನು ಕೇಂದ್ರ ಸರಕಾರ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಇಂತಹ ನೀತಿಗೆಟ್ಟ ಸರಕಾರವನ್ನು ಹಿಂದೆಂದೂ ಕಂಡಿರಲಿಲ್ಲ. ಬಿಜೆಪಿಯ ಜನವಿರೋಧಿ ನೀತಿಯ ಬಗ್ಗೆ ದೇಶದ ಸಾಮಾನ್ಯ ಜನತೆಗೆ ಅರಿವು ಮೂಡಿಸುವುದು ಕಾರ್ಮಿಕ ಸಂಘಟನೆಗಳ ಕರ್ತವ್ಯವಾಗಲಿ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್‌ ಸೆಂಟ್ರಲ್ ಯೂನಿಯನ್ ಅಧ್ಯಕ್ಷ ಎನ್.ಪಿ.ಸಾಮಿ, ಉಪಾಧ್ಯಕ್ಷೆ ಡಾ.ರೂತ್ ಮನೋರಮ, ಪ್ರಧಾನ ಕಾರ್ಯದರ್ಶಿ ಡಿ.ಧನಶೇಖರ್, ಮಹಿಳಾ ಕಾರ್ಯದರ್ಶಿ ಲೀಲಾವತಿ, ಖಜಾಂಚಿ ಕುಮಾರ್ ಮತ್ತಿತರರಿದ್ದರು.

ಬಿಜೆಪಿ ಹಾಗೂ ಆರೆಸ್ಸೆಸ್ ರಾಮಮಂದಿರ ಎನ್ನುವುದು ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರ. ಒಂದು ವೇಳೆ ಜನತೆಯ ಒತ್ತಾಯಕ್ಕೆ ರಾಮಮಂದಿರ ಕಟ್ಟಿದರೂ ಮುಂದಿನ ಹಂತವಾಗಿ ಸೀತಾ ಮಂದಿರ, ಹನುಮಂತನ ಮಂದಿರ ನಂತರ ಧರ್ಮರಾಯನ ಮಂದಿರ ಎನ್ನುವ ಮೂಲಕ ರಾಮಾಯಣ, ಮಹಾಭಾರತದ ಮಹಾ ಪುರುಷರನ್ನು ಚುನಾವಣಾ ಅಜೆಂಡವನ್ನಾಗಿ ಬಳಸಿಕೊಳ್ಳಲಿದ್ದಾರೆ. ಈ ಬಗ್ಗೆ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು.

-ಪಿ.ಜಿ.ಆರ್.ಸಿಂಧ್ಯಾ, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News