ದೇಶದ ಅಭಿವೃದ್ಧಿಗಾಗಿ ರೂಪಿಸಲಾದ ದೂರದೃಷ್ಟಿ ಬಜೆಟ್: ಯಡಿಯೂರಪ್ಪ

Update: 2019-02-01 13:38 GMT

ಬೆಂಗಳೂರು, ಫೆ. 1: ದೇಶದ ಇತಿಹಾಸದಲ್ಲೇ ಒಂದು ಅಭಿವೃದ್ಧಿಪರ ಮತ್ತು ಸಮಗ್ರ ಜನಾಂಗದ ವಿಕಾಸಕ್ಕೆ ಹಾದಿ ಮಾಡಿಕೊಡುವ ಬಜೆಟ್‌ವನ್ನು ಕೇಂದ್ರ ಮಂಡಿಸಿದೆ. ಆರ್ಥಿಕ ತಜ್ಞರು ಬಜೆಟ್ ಸ್ವಾಗತಿಸಿದ್ದು, ರಾಜ್ಯದ ಜನತೆ ವಿಜಯೋತ್ಸವ ಆಚರಿಸಿ ಇದಕ್ಕೆ ಮನ್ನಣೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ನಾಲ್ಕು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರದ ದಿಟ್ಟ ಆರ್ಥಿಕ ಸುಧಾರಣಾ ಕ್ರಮದಿಂದ ದೇಶದ ಬೊಕ್ಕಸಕ್ಕೆ ಆದಾಯ ಹರಿದು ಬಂದಿದ್ದು, ಕಪ್ಪು ಹಣದ ವ್ಯವಹಾರ ನಿಯಂತ್ರಿಸಿದ್ದರಿಂದ ಆರ್ಥಿಕ ಸ್ಥಿತಿ ಸದೃಢವಾಗಿದ್ದು, ಇದರ ಲಾಭವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಈ ಬಜೆಟ್ ನಿರ್ವಹಿಸಿದೆ.

ದೇಶದ ಯಾವುದೇ ವರ್ಗದ ಜನ, ಪ್ರದೇಶವನ್ನು ವಂಚಿತರನ್ನಾಗಿ ಮಾಡದೆ ದೇಶದ ಅಭಿವೃದ್ಧಿಯಲ್ಲಿ ಸರ್ವ ಜನಾಂಗವನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ರೈತರಿಗೆ ಒಳ್ಳೆಯ ಕೊಡುಗೆಗಳು ಸಿಕ್ಕಿವೆ. 6.5ಲಕ್ಷ ರೂ.ವರೆಗೆ ತೆರಿಗೆ ವಿನಾಯತಿ ಮಧ್ಯಮ ವರ್ಗಕ್ಕೆ ನೆಮ್ಮದಿ ತರಲಿದೆ. ಮಧ್ಯಮವರ್ಗ, ಸರಕಾರಿ ನೌಕರರಿಗೆ ತೆರಿಗೆ ವಿನಾಯಿತಿ ಸಹಕಾರಿ.

ಸತತ ಬರ, ಅತಿವೃಷ್ಟಿ, ಅನಾವೃಷ್ಟಿಯ ಪರಿಸ್ಥಿತಿಯಿಂದ ತತ್ತರಿಸುತ್ತಿರುವ ದೇಶದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ 6 ಸಾವಿರ ರೂ.ಜಮೆಯಿಂದ ದೇಶದ 12 ಲಕ್ಷ ರೈತರಿಗೆ ಅನುಕೂಲವಾಗಲಿದೆ. ತೆರಿಗೆ ಹೊರೆಯಿಲ್ಲದ ಜನಸ್ನೇಹಿ, ರೈತಪರ, ಮಹಿಳಾಪರ, ಕಾರ್ಮಿಕರ ಪರ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಮಹತ್ವ ನೀಡಿದ ಆರ್ಥಿಕ ಸುಧಾರಣೆಯ ಹಾಗೂ ದೇಶದ ಅಭಿವೃದ್ಧಿಗಾಗಿ ರೂಪಿಸಲಾದ ದೂರದೃಷ್ಟಿಯ ಬಜೆಟ್ ಇದು ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News