ಶಾಸಕರ ಬಂಧನಕ್ಕೆ ಅನುಮತಿ ಅಗತ್ಯವಿಲ್ಲ: ಸ್ಪೀಕರ್ ರಮೇಶ್‌ ಕುಮಾರ್

Update: 2019-02-01 14:02 GMT

ಬೆಂಗಳೂರು, ಫೆ. 1: ಶಾಸಕರ ಬಂಧನಕ್ಕೆ ವಿಧಾನಸಭೆ ಸ್ಪೀಕರ್ ಅನುಮತಿ ಅಗತ್ಯವಿಲ್ಲ. ಮುಖ್ಯಮಂತ್ರಿಯಾಗಿರಲಿ, ಶಾಸಕನಾಗಿರಲಿ ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದು ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಾಸಕರ ಬಂಧನ-ಬಿಡುಗಡೆ ಬಗ್ಗೆ ಸಂಬಂಧಪಟ್ಟ ಅಧಿಕಾರಿ ತನಗೆ ಮಾಹಿತಿ ನೀಡುತ್ತಾರೆ. ಅದನ್ನು ನಾವು ಸದನದ ಸದಸ್ಯರಿಗೆ ತಿಳಿಸುತ್ತೇವೆ ಎಂದು ಹೇಳಿದರು.

ಸದನದ ಹೊರಗಿನ ಶಾಸಕರ ನಡವಳಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಭಾರತೀಯ ದಂಡ ಸಂಹಿತೆ(ಐಪಿಸಿ) ದೃಷ್ಟಿಯಲ್ಲಿ ಮುಖ್ಯಮಂತ್ರಿ, ಸಚಿವ, ಶಾಸಕನೆಂಬ ಯಾವುದೇ ಭೇದವಿಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ತಪ್ಪು ಮಾಡಿದ ವ್ಯಕ್ತಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.

ನನಗೆ ಗೊತ್ತಿಲ್ಲ: ಅತೃಪ್ತ ಶಾಸಕರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರೆಷ್ಟು ಮಂದಿ ಇದ್ದಾರೋ, ಅವರು ಯಾವ ಪಕ್ಷದವರು ಎಂಬುದು ನನಗೆ ತಿಳಿಯದು. ಈವರೆಗೂ ನಮ್ಮ ಕಚೇರಿಗೆ ಯಾರೂ ಸಂಪರ್ಕಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಾನೂ ವಿದೇಶಕ್ಕೆ ತೆರಳಿದ್ದೇನೆಂಬ ಊಹಾಪೋಹಗಳು ಕೇಳಿಬಂದಿದ್ದವು. ಆದರೆ, ನಾನು ಎಲ್ಲೂ ಹೋಗಿರಲಿಲ್ಲ. ಬದಲಿಗೆ ನನ್ನ ತೋಟದ ಮನೆಯಲ್ಲೇ ಇದ್ದೆ. ವಿದೇಶಕ್ಕೆ ಹೋಗುವ ಅಗತ್ಯಬಿದ್ದರೆ ಹೋಗುತ್ತೇನೆ. ನನ್ನನ್ನು ಯಾರೂ ವಿದೇಶಕ್ಕೆ ಕಳುಹಿಸಬೇಕಿಲ್ಲ ಎಂದು ರಮೇಶ್‌ ಕುಮಾರ್ ನುಡಿದರು.

ಫೆ.6 ರಿಂದ ಅಧಿವೇಶನ: ಫೆ.6ರಿಂದ 15ರ ವರೆಗೆ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಫೆ.6ಕ್ಕೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಶಿಷ್ಟಾಚಾರದ ಪ್ರಕಾರ ರಾಜ್ಯಪಾಲರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂಬಂಧ ಕಲಾಪ ಸಲಹಾ ಸಮಿತಿ (ಬಿಎಸ್‌ಸಿ) ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಲೇಖಾನುದಾನಕ್ಕೆ ಒಪ್ಪಿಗೆ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದರು.

‘ದೇಶದ ಜನತೆ ಅಕ್ಷರಜ್ಞಾನವಿಲ್ಲದ ಕಾಲದಿಂದಲೂ ಅತ್ಯಂತ ಪ್ರಬುದ್ಧತೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಸೂಕ್ಷ್ಮಮತಿಗಳಾಗಿರುವ ಜನರು, ಯಾರು ಎಷ್ಟೇ ಭರವಸೆಗಳನ್ನು ನೀಡಿದರೂ ಎಂದಿಗೂ ಮರುಳಾಗುವುದಿಲ್ಲ’

-ಕೆ.ಆರ್.ರಮೇಶ್‌ ಕುಮಾರ್ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News