ಠಾಣೆಯಲ್ಲಿ ಗುಂಪುಗಾರಿಕೆ ಮಾಡಿದ ಪೊಲೀಸರಿಗೆ ಖಡಕ್ ಅಧಿಕಾರಿ ಅಣ್ಣಾಮಲೈ ಮಾಡಿದ್ದೇನು ಗೊತ್ತೇ ?

Update: 2019-02-01 14:12 GMT

ಬೆಂಗಳೂರು, ಫೆ.1: ಪೊಲೀಸ್ ಠಾಣೆಯಲ್ಲಿ ಗುಂಪುಗಾರಿಕೆ ಆರೋಪಗಳು ಕೇಳಿಬಂದ ಬೆನ್ನಲ್ಲೇ, ಠಾಣೆಯೊಳಗಿನ ಬರೋಬ್ಬರಿ 71 ಪೊಲೀಸ್ ಸಿಬ್ಬಂದಿಯನ್ನು ನಗರದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ದಿಢೀರ್ ವರ್ಗಾವಣೆ ಮಾಡಿದ್ದಾರೆ.

ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದು, ಈ ರೀತಿ ವರ್ಗಾವಣೆ ಆಗಿರುವುದು ಬೆಂಗಳೂರಿನ ಪೊಲೀಸ್ ಠಾಣೆ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ.

ಕಾರಣವೇನು?: ಇತ್ತೀಚೆಗೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರ ನಡುವೆ ಒಳ ಜಗಳಗಳು ನಡೆದಿತ್ತು. ಅಷ್ಟೇ ಅಲ್ಲದೆ, ಮಹಿಳೆಯೊಬ್ಬಾಕೆಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ಲೇಔಟ್ ಠಾಣೆಯ ಎರಡು ಗುಂಪುಗಳ ನಡುವೆ ಜಗಳವಾಗಿತ್ತು ಎಂದು ತಿಳಿದುಬಂದಿದೆ.

ಎಎಸ್ಸೈ ರೇಣುಕಾಸ್ವಾಮಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು ಎಂದು ಕೆಲ ಪೊಲೀಸರೇ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಕೆಲ ದಿನಗಳ ಹಿಂದೆ ಠಾಣಾಧಿಕಾರಿ ಅಮಾನತು ಮಾಡಲು, ಠಾಣೆಯ ಕೆಲ ಸಿಬ್ಬಂದಿಗಳೇ ರೈಫಲ್‌ಗಳನ್ನು ಕದ್ದು ಬಚ್ಚಿಟ್ಟಿದ್ದರು ಎನ್ನುವ ಆರೋಪವು ಕೇಳಿಬಂದಿತ್ತು. ಅಷ್ಟೇ ಅಲ್ಲದೆ, ಇಲ್ಲಿನ ಸಿಬ್ಬಂದಿಯ ಜಗಳ, ಹೊರ ಹೋಗುವ ಜೊತೆಗೆ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಈ ಸಂಬಂಧ ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ, ಅವರ ಸೂಚನೆ ಮೇರೆಗೆ ಅಣ್ಣಾಮಲೈ ಎಲ್ಲ ಸಿಬ್ಬಂದಿ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

‘ಪೊಲೀಸರು ಜನಸ್ನೇಹಿ ಆಗಲಿ’

ಕುಮಾರಸ್ವಾಮಿ ಠಾಣಾ ಪೊಲೀಸರ ವಿರುದ್ಧ ಕೆಲ ಆರೋಪಗಳು ಕೇಳಿಬಂದಿತ್ತು. ಈ ಸಂಬಂಧ ಕೆಲವರನ್ನು ಮಾತ್ರ ವರ್ಗಾವಣೆ ಮಾಡಿದರೆ, ಗುರಿಯಾಗಿಸಿಕೊಂಡು ಮಾಡಿದ್ದಾರೆ ಎಂದು ಹೇಳುತ್ತಾರೆ. ಹೀಗಾಗಿಯೇ, ಎಲ್ಲರನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸರು ಜನಸ್ನೇಹಿ ಆಗಬೇಕು.

-ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ

ವರ್ಗಾವಣೆ ಸುದ್ದಿ ಕೇಳಿ ಪೇದೆ ಸಾವು 

71 ಪೊಲೀಸ್ ಸಿಬ್ಬಂದಿಯ ದಿಢೀರ್ ವರ್ಗಾವಣೆ ಸುದ್ದಿ ಕೇಳಿ, ಹೃದಯಾಘಾತದಿಂದ ಕುಮಾರಸ್ವಾಮಿ ಲೇಔಟ್‌ನ ಮುಖ್ಯಪೇದೆ ಬುರಾನಸಬ್ ನದಾಫ್(52) ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನದಾಫ್ ಅವರನ್ನು ಕುಮಾರಸ್ವಾಮಿ ಲೇಔಟ್‌ನಿಂದ ಸಂಪಂಗಿರಾಮನಗರಕ್ಕೆ ವರ್ಗಾವಣೆ ಮಾಡಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News