ರೈತ-ಯುವ ಜನ ವಿರೋಧಿ ಬಜೆಟ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಫೆ.1: ದೇಶದ ಯುವಜನರು ಮತ್ತು ರೈತರು ಸಂಕಷ್ಟದಲ್ಲಿದ್ದಾರೆ. ಈ ಎರಡೂ ವರ್ಗಗಳ ನಿರೀಕ್ಷೆ ಹುಸಿಯಾಗಿದೆ. ಇದು ಸಂಪೂರ್ಣವಾಗಿ ರೈತ ವಿರೋಧಿ ಮತ್ತು ಯುವ ಜನವಿರೋಧಿ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
2019-20ನೇ ಸಾಲಿನ ಕೇಂದ್ರದ ಮಧ್ಯಂತರ ಬಜೆಟ್ ಕುರಿತು ಶುಕ್ರವಾರ ತಮ್ಮ ಸರಕಾರಿ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಷ್ಟೇ ಬಹಿರಂಗಗೊಂಡ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ಎಸ್‌ಎಸ್‌ಒ) ಪ್ರಕಾರ ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಿಗೆ ಹೋಲಿಸಿದರೆ ಅತಿಹೆಚ್ಚು ಅಂದರೆ ಶೇ.6.1ಕ್ಕೆ ಹೆಚ್ಚಿದೆ ಎಂದರು.
ನಿರುದ್ಯೋಗ ದರ ಗ್ರಾಮಾಂತರ ಪ್ರದೇಶದಲ್ಲಿ ಶೇ.5.3ರಷ್ಟು ಇದ್ದರೆ, ನಗರ ಪ್ರದೇಶದಲ್ಲಿ ಶೇ.7.8ರಷ್ಟಿದೆ. ಕಳೆದ ಐದು ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಲೇ ಬಂದಿದೆ. ನಿರುದ್ಯೋಗ ದೇಶದ ಈಗಿನ ಜ್ವಲಂತ ಸಮಸ್ಯೆ. ಈ ಯುವ ಸಮುದಾಯಕ್ಕೆ ಸಮಾಧಾನ ನೀಡಬಲ್ಲ ಯಾವುದೇ ಯೋಜನೆ ಬಜೆಟ್‌ನಲ್ಲಿ ಇಲ್ಲ ಎಂದು ಅವರು ಟೀಕಿಸಿದರು.
ಉದ್ಯೋಗ ಸೃಷ್ಟಿಗೆ ನೆರವಾಗುವಂತಹ ಯಾವ ಯೋಜನೆಗಳನ್ನು ಹಣಕಾಸು ಸಚಿವರು ಘೋಷಿಸಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆ ಎಂದು ನೀಡಿದ್ದ ಆಶ್ವಾಸನೆಯ ಬಗ್ಗೆ ಇಡೀ ಬಜೆಟ್‌ನಲ್ಲಿ ಸೊಲ್ಲೆತ್ತಿಲ್ಲ. ಇದು ಸಹಜವೇ ಆಗಿದೆ. ಯಾಕೆಂದರೆ ಈ ಬಗ್ಗೆ ಯಾವ ಹೊಸಯೋಜನೆ ಘೋಷಿಸಿದರೂ ಈ ದೇಶದ ಯುವಜನತೆ ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇಡೀ ದೇಶದಲ್ಲಿ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ರೈತರು ಸಾಲದ ಹೊರೆಯಿಂದ ಕುಸಿದು ಹೋಗಿ ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಯುಪಿಎ ಕಾಲದಲ್ಲಿ ಶೇ. 5.6ರಷ್ಟಿದ್ದ ಕೃಷಿ ಕ್ಷೇತ್ರದ ಅಭಿವೃದ್ಧಿ ದರ ಶೇ.4.9ಕ್ಕೆ ಕುಸಿದಿದೆ. ರೈತರು ಕೃಷಿ ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸುಮಾರು 11 ಲಕ್ಷ ಕೋಟಿರೂ. ಕೃಷಿ ಸಾಲವನ್ನು ರೈತರು ಪಡೆದಿದ್ದಾರೆ. ಸತತ ಬರಗಾಲ ಮತ್ತು ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ರೈತರು ದಿವಾಳಿಯಾಗಿದ್ದಾರೆ. ರೈತರ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಬಹುದೆಂಬ ನಿರೀಕ್ಷೆ ರೈತರಿಗೂ ಇತ್ತು, ನನಗೂ ಇತ್ತು ಅದು ಹುಸಿಯಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರ ಮತ್ತು ಈಗಿನ ಸಮ್ಮಿಶ್ರ ಸರಕಾರ ರೈತರ ಸಾಲಮನ್ನಾಕ್ಕೆ ಆದ್ಯತೆ ನೀಡಿತ್ತು. ಇದರ ಬಗ್ಗೆ ಪ್ರಸ್ತಾಪವೇ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ವರಮಾನ ತೆರಿಗೆಯ ವಿನಾಯಿತಿ ಮಿತಿಯನ್ನು ಐದು ಲಕ್ಷ ರೂಪಾಯಿಗೆ ಹೆಚ್ಚಿಸಿದ್ದು ಸ್ವಾಗತಾರ್ಹ.ಇದರಿಂದ ವರಮಾನ ತೆರಿಗೆ ಆದಾಯ ಕಡಿಮೆಯಾಗಲಿರುವುದು ಕೂಡಾ ಸತ್ಯ. ಹೀಗಿದ್ದಾಗ ಆ ಆದಾಯ ಕೊರತೆಯನ್ನು ತುಂಬುವುದು ಹೇಗೆ ಎನ್ನುವ ಬಗ್ಗೆ ಹಣಕಾಸು ಸಚಿವರು ಬಜೆಟ್‌ನಲ್ಲಿ ವಿವರ ನೀಡಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇದು ಮಧ್ಯಂತರ ಬಜೆಟ್, ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಈ ಬಜೆಟ್‌ನ ಪ್ರಸ್ತಾವಗಳನ್ನು ಅನುಷ್ಠಾನಕ್ಕೆ ತರಲು ತಮ್ಮ ಸರಕಾರ ಇರುವುದಿಲ್ಲ ಎನ್ನುವುದು ಪ್ರಧಾನಿ ನರೇಂದ್ರಮೋದಿಗೂ ಗೊತ್ತಿದೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಂತಿದೆ ಈ ಬಜೆಟ್. ಐದು ವರ್ಷಗಳ ಹಿಂದೆ ಬಿಜೆಪಿ ಪ್ರಕಟಿಸಿದ್ದ ಪಕ್ಷದ ಪ್ರಣಾಳಿಕೆಯ ಗತಿಯೇ ಈ ಬಜೆಟ್‌ಗೂ ಬರಲಿದೆ. ಯಾವುದೂ ಅನುಷ್ಠಾನವಾಗಲಾರದು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯ ಗತಿಯೇ ಈ ಬಜೆಟ್ ಪ್ರಸ್ತಾಪಗಳಿಗೂ ಆಗಲಿದೆ. ಮುಂದಿನ ನಾಲ್ಕು ತಿಂಗಳನಂತರ ಅಧಿಕಾರಕ್ಕೆ ಬರಲಿರುವ ನಮ್ಮ ಸರಕಾರ ಪೂರ್ಣಾವಧಿ ಬಜೆಟ್ ಮಂಡಿಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.