ಫಿಸಿಯೊಥೆರಪಿ ಶಿಕ್ಷಣದ ವ್ಯಾಪ್ತಿಯನ್ನು ಸರಕಾರ ಹೆಚ್ಚಿಸಬೇಕು: ಸಚಿವ ಯು.ಟಿ.ಖಾದರ್

Update: 2019-02-01 15:02 GMT

ಬೆಂಗಳೂರು, ಫೆ.1: ದೇಹಕ್ಕೆ ಭೌತವಿಧಾನದ ಮೂಲಕ ಚಿಕಿತ್ಸೆ ನೀಡುವ ಫಿಸಿಯೊಥೆರಪಿ ವೈದ್ಯಕೀಯ ಶಿಕ್ಷಣದ ವ್ಯಾಪ್ತಿ ಅನ್ನು ರಾಜ್ಯ ಸರಕಾರ ಹೆಚ್ಚಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಭಾರತೀಯ ಪಿಸಿಯೊಥೆರಪಿ ತಜ್ಞರ ಸಂಘದ 57ನೆ ವಾರ್ಷಿಕ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಫಿಸಿಯೊಥೆರಪಿ ಅನ್ನು ಇತರೆ ವೈದ್ಯಕೀಯ ವಿಭಾಗದಿಂದ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಫಿಸಿಯೊಥೆರಪಿ ಕ್ಷೇತ್ರಕ್ಕೆ ಹೆಚ್ಚಿನ ಭವಿಷ್ಯವಿದೆ ಎಂದ ಅವರು, ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ, ರಾಜ್ಯ ಸರಕಾರವು ಫಿಸಿಯೊಥೆರಪಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಇದರ ವ್ಯಾಪ್ತಿ ಹೆಚ್ಚಿಸಬೇಕು. ಮಾನವನ ಸದ್ಯದ ಒತ್ತಡದ ಜೀವನಕ್ಕೆ ಫಿಸಿಯೊಥೆರಪಿ ಚಿಕಿತ್ಸೆ ಅಗತ್ಯವಾಗಿ ಬೇಕಿದೆ ಎಂದು ನುಡಿದರು.

ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಮಾತನಾಡಿ, ಇಪ್ಕಾನ್ ಬೆಂಗಳೂರು-2019 ಸಮ್ಮೇಳನದಲ್ಲಿ ಹೊಸ ತಂತ್ರಜ್ಞಾನದ ಪರಿಚಯವಾಗಲಿದೆ. ಆದರೆ, ಇದೇ ಮಾಹಿತಿಅನ್ನು ಫಿಸಿಯೊಥೆರಪಿ ತಜ್ಞರು ವಿದೇಶಗಳಿಗೆ ಹೋಗಿ ತಿಳಿದುಕೊಳ್ಳಲು ಅಧಿಕ ಹಣ ಬೇಕಾಗುತ್ತದೆ ಎಂದರು.

ಜರ್ಮನಿಯ ಫಿಸಿಯೊಥೆರಪಿ ತಜ್ಞ ಡಾ.ಅಲ್ರಿಚ್ ಜಿ.ರಂಡೋಲ್ ಮಾತನಾಡಿ, ಕೈ, ಕಾಲಿಗೆ ಪೆಟ್ಟುಬಿದ್ದು ಸುಲಭವಾಗಿ ಚಲಿಸಲು ಸಾಧ್ಯವಾಗದಿದ್ದರೆ ಹಾಗೂ ಚಿಕ್ಕ ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಸ್ನಾಯುಗಳ ಚಲನೆ ಸರಳವಾಗದಿದ್ದರೆ, ಅವರನ್ನು ಪಾರ್ಶ್ವವಾಯುಪೀಡಿತರು ಎಂದು ಗುರುತಿಸಿ, ಅವರಿಗೆ ಫಿಸಿಯೊಥೆರಫಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವಿವರಿಸಿದರು.

ಫಿಸಿಯೊ ಎಂದರೆ ದೇಹ, ಥೆರಫಿ ಎಂದರೆ ಚಿಕಿತ್ಸೆ ಎಂದರ್ಥ. ಒಟ್ಟಾರೆ ಇದನ್ನು ದೈಹಿಕ ಚಿಕಿತ್ಸೆ ಎನ್ನಬಹುದು. ಆದರೆ, ವೈದ್ಯರು ಸೂಚಿಸುವ ಔಷಧಗಳು ದೇಹದ ಒಳಗಿನಿಂದ ಕೆಲಸ ಮಾಡಿದರೆ ಫಿಸಿಯೊಥೆರಪಿ ಸ್ನಾಯುಗಳ ಚಲನೆಗೆ ಸಹಕಾರಿ ಎಂದು ಅವರು ಹೇಳಿದರು.

ಸಮ್ಮೇಳನದಲ್ಲಿ ಯುಎಇ ತುಂಬೆ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಸೇರಿದಂತೆ ಫಿಸಿಯೊಥೆರಪಿ ತಜ್ಞರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್. ಸಚ್ಚಿದಾನಂದ, ಸಂಘದ ಕಾರ್ಯದರ್ಶಿ ಡಾ.ಎ.ಸುರೇಶ್ ಬಾಬು ರೆಡ್ಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News