ಪೌರ ಕಾರ್ಮಿಕರ ಖಾಯಂ ವಿಚಾರ: ಸಂಪುಟದ ತೀರ್ಮಾನ ಜಾರಿಗೆ ಸಿಎಂಗೆ ಪತ್ರ ಬರೆಯುವೆ- ಎಚ್.ಆಂಜನೇಯ
ಬೆಂಗಳೂರು, ಫೆ.1: ಹಿಂದಿನ ಸರಕಾರದ ಅವಧಿಯಲ್ಲಿ ಪೌರ ಕಾರ್ಮಿಕರನ್ನು ಖಾಯಂ ಮಾಡುವ ಕುರಿತ ಸಚಿವ ಸಂಪುಟದ ತೀರ್ಮಾನವನ್ನು ಕೂಡಲೇ ಜಾರಿ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ನಗರದ ಗಾಂಧೀ ಭವನದಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಲು ವಿವಿಧ ಜಿಲ್ಲೆಗಳ ಕಾರ್ಮಿಕ ಮುಖಂಡರ ಜತೆ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಸಭೆಯಲ್ಲಿ ಕೆಲಸ ಮಾಡುತ್ತಿರುವ 25ಸಾವಿರ ಪೌರಕಾರ್ಮಿಕರಲ್ಲಿ ಖಾಲಿ ಇರುವ 10 ಸಾವಿರ ಪೌರಕಾರ್ಮಿಕರನ್ನ ಖಾಯಂ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದರು.
ಆದರೆ ಹಿಂದಿನ ಸರಕಾರದ ಸಚಿವ ಸಂಪುಟದ ನಮ್ಮ ನಿರ್ಧಾರವನ್ನು ತಿರುಚಿ ಹಾಕುವ ಮೂಲಕ ನೇಮಕಾತಿ ಪ್ರಕ್ರಿಯೆ ತಟಸ್ಥವಾಗಿದೆ. ಹೀಗಾಗಿ, ಅನ್ಯಾಯ ಎದುರಿಸುತ್ತಿರುವ ಪೌರಕಾರ್ಮಿಕರ ಬೇಡಿಕೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಪೌರ ಕಾರ್ಮಿಕರ ಕೆಲಸ ಯಾರು ಮಾಡಲು ಸಾಧ್ಯವಿಲ್ಲ. ಕೊಚ್ಚೆಗುಂಡಿಗಳಲ್ಲಿ, ಮ್ಯಾನ್‌ಹೋಲ್‌ಗಳಲ್ಲಿ ಇಳಿದು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅವರು ಪರಿಸರವನ್ನು ಸ್ವಚ್ಛವಾಗಿ, ಆರೋಗ್ಯವಂತವಾಗಿಡಲು ದುಡಿಯುತ್ತಿದ್ದಾರೆ. ಅಂತಹ ಕಾರ್ಮಿಕರ ಕೆಲಸವನ್ನು ಖಾಯಂ ಮಾಡಲು ಸರಕಾರ ಹಿಂದೇಟು ಹಾಕುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಪೌರಕಾರ್ಮಿಕರಿಗೆ ಸರಿಯಾದ ಮೂಲಭೂತ ಸೌಲಭ್ಯ ಸೇರಿದಂತೆ ಮತ್ತಿತರೆ ಸವಲತ್ತುಗಳನ್ನು ನೀಡಬೇಕು. ನಮ್ಮ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ಪೌರಕಾರ್ಮಿಕರು ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂಧು ಎಚ್ಚರಿಕೆ ನೀಡಿದರು.
ಹಾವೇರಿಯ ಸುಭಾಷ್ ಎಂಬವರು ಮಾತನಾಡಿ, ಅಧಿಕಾರಿಗಳನ್ನು ನಾವು ಗುರುತಿನ ಚೀಟಿ ನೀಡುವಂತೆ ಕೇಳಿದರೆ ನಮ್ಮನ್ನೇ ದಬಾಯಿಸುತ್ತಾರೆ. ನೀನು ಪೌರ ಕಾರ್ಮಿಕನಾ, ಹಾಗಾದರೆ ನಿನ್ನ ಹತ್ತಿರ ಸಾಕ್ಷಿ ಏನಿದೆ ಎಂದು ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಮತ್ತೊಬ್ಬ ಕಾರ್ಮಿಕ ಕಾರವಾರದ ಕಿರಣ್ ಮಾತನಾಡಿ, ನಮಗೆ ಸಿಗಬೇಕಾದ ಗ್ಲೌಸ್, ಶೂ ಸೇರಿದಂತೆ ಹಲವನ್ನು ಅಧಿಕಾರಿಗಳು ನೀಡಲು ಮುಂದಾಗುತ್ತಿಲ್ಲ. ಕೇಳಿದರೆ ನಮ್ಮ ಮೇಲೆಯೇ ದೌರ್ಜನ್ಯಕ್ಕೆ ಮುಂದಾಗುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ಪೌರಕಾರ್ಮಿಕ ಮುಖಂಡ ಮುನಿರಾಜು, ಸಫಾಯಿ ಕರ್ಮಚಾರಿಯ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ, ಓಬಳೇಶ, ಮಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.