ವಾಟ್ಸ್ಯಾಪ್ ಮೂಲಕ ಕೃತಿ ರಚಿಸಿ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಗೆದ್ದ ಇರಾನ್ ಪತ್ರಕರ್ತ

Update: 2019-02-02 10:06 GMT

ಸಿಡ್ನಿ, ಫೆ.2: ಆಸ್ಟ್ರೇಲಿಯಾಕ್ಕೆ ಆಶ್ರಯ ಕೋರಿ ಬಂದು ವರ್ಷಗಟ್ಟಲೆ ದಿಗ್ಬಂಧನಕ್ಕೊಳಗಾಗಿರುವ ಇರಾನ್ ದೇಶದ ಪತ್ರಕರ್ತ ಬೆಹ್ರೋಝ್ ಬೂಚಾನಿ ಆಸ್ಟ್ರೇಲಿಯಾದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾದ ‘2019ನೆ ವಿಕ್ಟೋರಿಯನ್ ಪ್ರಶಸ್ತಿ’ ಗೆದ್ದಿದ್ದಾರೆ.

“ನೋ ಫ್ರೆಂಡ್ ಬಟ್ ದಿ ಮೌಂಟೆನ್ಸ್: ರೈಟಿಂಗ್ ಫ್ರಂ ಮಾನುಸ್ ಪ್ರಿಸನ್' ಎಂಬ ಕೃತಿಗೆ ಈ ಪ್ರಶಸ್ತಿ ಬಂದಿದ್ದು, ಪ್ರಶಸ್ತಿಯ ಭಾಗವಾಗಿ ಅವರಿಗೆ ಒಂದು ಲಕ್ಷ ಆಸ್ಟ್ರೇಲಿಯನ್ ಡಾಲರ್ ಬಹುಮಾನ ದೊರಕಿದೆ.

ತಮ್ಮ ದಿಗ್ಬಂಧನ ಕೇಂದ್ರದಿಂದ ವಾಟ್ಸ್ಯಾಪ್ ಟೆಕ್ಸ್ಟ್ ಸಂದೇಶಗಳನ್ನು ಅನುವಾದಕರಿಗೆ ಕಳುಹಿಸಿಯೇ ಅವರು ಈ ಕೃತಿ ರಚಿಸಿದ್ದರೆಂಬುದು ಉಲ್ಲೇಖಾರ್ಹ. ಮೂವತ್ತೈದು ವರ್ಷದ ಬೂಚಾನಿ ಅವರ ಕೃತಿಯು ವಿಕ್ಟೋರಿಯನ್ ಪ್ರೀಮಿಯರ್ಸ್ ಸಾಹಿತ್ಯ ಪ್ರಶಸ್ತಿಯನ್ನೂ ತನ್ನದಾಗಿಸಿದೆ.

ಅವರನ್ನು ಪಪುವಾ ನ್ಯೂಗಿನಿ ಒಲ್ಲಿನ ಮಾನುಸ್ ದ್ವೀಪದಲ್ಲಿರಿಸಲಾಗಿತ್ತು. ಈ ಕೇಂದ್ರವನ್ನು 2017ರ ಅಂತ್ಯದ ವೇಳೆ ಮುಚ್ಚಿದ್ದರಿಂದ ಅವರು ಹಾಗೂ ಅವರಂತೆಯೇ ದಿಗ್ಬಂಧನದಲ್ಲಿರುವ ನೂರಾರು ಮಂದಿಯನ್ನು ಬೇರೊಂದು ಸ್ಥಳಕ್ಕೆ ಸಾಗಿಸಲಾಗಿದೆ.

ಆಸ್ಟ್ರೇಲಿಯಾಗೆ ಆಶ್ರಯ ಕೋರಿ ಬರುವವರಿಗೆ ಸಂಬಂಧಿಸಿದಂತೆ ಆ ದೇಶ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದು ಯಾವ ನಿರಾಶ್ರಿತರಿಗೂ ಆ ದೇಶದಲ್ಲಿ ಆಶ್ರಯ ಒದಗಿಸಲಾಗುವುದಿಲ್ಲ. ಬೂಚಾನಿ 2013ರಲ್ಲಿ ಇರಾನ್ ದೇಶದಿಂದ ವಲಸೆ ಬರುವಾಗ ದಿಗ್ಬಂಧನಕ್ಕೊಳಗಾಗಿದ್ದರು.

ಇರಾನ್ ದೇಶದ ಇಲಮ್ ಎಂಬಲ್ಲಿ 1983ರಲ್ಲಿ ಜನಿಸಿದ ಅವರು ರಾಜಕೀಯ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ನಂತರ ಕುರ್ದಿಷ್ ಪತ್ರಿಕೆ ವೆರ್ಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆ ಸಂಸ್ಥೆಯ ಕಚೇರಿಯ ಮೇಲೆ 2013ರ ಫೆಬ್ರವರಿಯಲ್ಲಿ ಇಸ್ಲಾಮಿಕ್ ರಿವೊಲ್ಯೂಷನರಿ ಗಾರ್ಡ್ ಸದಸ್ಯರು ದಾಳಿ ನಡೆಸಿದ ನಂತರ ಅವರ ಒಂಬತ್ತು ಸಹೋದ್ಯೋಗಿಗಳ ಬಂಧನವಾಗಿತ್ತು. ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಅವರು ಆಸ್ಟ್ರೇಲಿಯಾಗೆ  ಇತರ 60 ಮಂದಿ ಜತೆ ಬೋಟಿನಲ್ಲಿ ವಲಸೆ ಹೋದರೂ ಅಲ್ಲಿ  ದಿಗ್ಬಂಧನಕ್ಕೊಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News