ಪೇ ಟು ಸ್ಟೇ ವಲಸೆ ಹಗರಣ: ಅಮೆರಿಕದಲ್ಲಿ ಬಂಧಿತ 130 ವಿದ್ಯಾರ್ಥಿಗಳಲ್ಲಿ 129 ಜನರು ಭಾರತೀಯರು

Update: 2019-02-02 14:49 GMT

ವಾಷಿಂಗ್ಟನ್,ಫೆ.2: ‘‘ಪೇ ಟು ಸ್ಟೇ(ಉಳಿದುಕೊಳ್ಳಲು ಹಣಪಾವತಿ)’ ವಂಚನೆಯ ತನಿಖೆಯನ್ನು ನಡೆಸುತ್ತಿರುವ ಅಮೆರಿಕದ ಅಧಿಕಾರಿಗಳು ಮಿಚಿಗನ್‌ನ ಡೆಟ್ರಾಯಿಟ್‌ನ ನಕಲಿ ವಿವಿಯಲ್ಲಿ ಪ್ರವೇಶ ಪಡೆದಿದ್ದ 129 ಭಾರತೀಯರು ಸೇರಿದಂತೆ 130 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಇದು ಗುರುವಾರದವರೆಗಿನ ಸಂಖ್ಯೆಯಾಗಿದ್ದು,ಇನ್ನಷ್ಟು ಬಂಧನಗಳಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿದ್ಯಾರ್ಥಿಗಳು ಈಗ ಕ್ರಿಮಿನಲ್ ಆರೋಪಗಳು ಹೊರಿಸಲ್ಪಡುವ ಅಥವಾ ಗಡಿಪಾರುಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ವಲಸೆ ನ್ಯಾಯಾಲಯಗಳು ತಮ್ಮ ಪ್ರಕರಣವನ್ನು ಇತ್ಯರ್ಥಗೊಳಿಸುವವರೆಗೂ ಈ ವಿದ್ಯಾರ್ಥಿಗಳು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯ ವಶದಲ್ಲಿರುತ್ತಾರೆ. ಅನರ್ಹ ವಿದೇಶಿಯರು ಅಮೆರಿಕದಲ್ಲಿ ವಾಸವಾಗಿರಲು ಮತ್ತು ದುಡಿಯಲು ನೆರವಾಗಲು ವಿದ್ಯಾರ್ಥಿ ವೀಸಾಗಳ ದುರುಪಯೋಗದ ವಲಸೆ ವಂಚನೆಯನ್ನು ಬಯಲಿಗೆಳೆಯಲು ಅಮೆರಿಕದ ತಾಯ್ನಾಡು ಭದ್ರತಾ ಇಲಾಖೆಯು ಕೈಗೊಂಡಿದ್ದ ಕುಟುಕು ಕಾರ್ಯಾಚರಣೆಯ ಅಂಗವಾಗಿ ಈ ನಕಲಿ ವಿವಿಯನ್ನು 2015ರಲ್ಲಿಯೇ ತೆರೆಯಲಾಗಿತ್ತು.

ವಿದೇಶಿಯರು ಅಮೆರಿಕದಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಉಳಿದುಕೊಂಡು ದುಡಿಯಲು ಅವಕಾಶ ಕಲ್ಪಿಸಲು ‘ಪೇ ಟು ಸ್ಟೇ’ ಜಾಲವನ್ನು ನಡೆಸಲು ಫಾರ್ಮಿಂಗ್ಟನ್ ವಿವಿ ಹೆಸರಿನ ಈ ನಕಲಿ ವಿವಿಯನ್ನು ಬಳಸಿಕೊಂಡಿದ್ದ ಭಾರತ ಮೂಲದ ಎಂಟು ಜನರನ್ನು ಬಂಧಿಸಿರುವುದಾಗಿ ತನಿಖಾಧಿಕಾರಿಗಳು ಗುರುವಾರ ಪ್ರಕಟಿಸಿದ್ದರು. ಈ ಆರೋಪಿಗಳು ವಿದ್ಯಾರ್ಥಿಗಳನ್ನು ಈ ನಕಲಿ ವಿವಿಗೆ ಸೇರಿಸಿದ್ದರು.

ಜಾಲದ ರೂವಾರಿಗಳು ಭಾರತೀಯರು ಅಥವಾ ಭಾರತ ಮೂಲದ ಅಮೆರಿಕನ್ ಪ್ರಜೆಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭರತ ಕಾಕಿರೆಡ್ಡಿ,ಸುರೇಶ ಕೆಂದಲ,ಫಣಿದೀಪ ಕರ್ನಾಟಿ,ಪ್ರೇಮ್ ರಂಪೀಸಾ,ಸಂತೋಷ ಸಾಮಾ,ಅವಿನಾಶ ಥಕ್ಕಲಪಲ್ಲಿ,ಅಶ್ವಂತ ನುನೆ ಮತ್ತು ನವೀನ ಪ್ರತಿಪಾಠಿ ಅವರು ಈ ಆರೋಪಿಗಳಾಗಿದ್ದಾರೆ.

ನಕಲಿ ವಿವಿಯಲ್ಲಿ ಕನಿಷ್ಠ 600 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಅಮೆರಿಕ ಅಧಿಕಾರಿಗಳ ಸಂಪರ್ಕದಲ್ಲಿದ್ದು,ಬಂಧಿತ ವಿದ್ಯಾರ್ಥಿಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದರು.

ಹೆಚ್ಚಿನ ಬಂಧಿತ ವಿದ್ಯಾರ್ಥಿಗಳು ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಗೆ ಸೇರಿದವರಾಗಿದ್ದು ಸಮುದಾಯ ಸಂಘಟನೆಗಳ ನೆರವು ಪಡೆಯುತ್ತಿದ್ದಾರೆ.

ಹೆಚ್ಚಿನ ವಿದ್ಯಾರ್ಥಿಗಳು ಈ ವಿವಿ ಅಸಲಿಯೆಂದು ಭಾವಿಸಿ ಪ್ರವೇಶ ಪಡೆದಿದ್ದರು ಎಂದು ವಕೀಲರು ವಾದಿಸಿದ್ದಾರೆ. ೀ ಪೈಕಿ ಕೆಲವರು ಬೇರೆ ಕಡೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು,ಅವು ಮಾನ್ಯತೆಯನ್ನು ಕಳೆದುಕೊಂಡ ಬಳಿಕ ಫಾರ್ಮಿಂಗ್ಟನ್ ವಿವಿಗೆ ಬಂದು ಸೇರಿಕೊಂಡಿದ್ದರು. ಇತರರು ಎರಡನೇ ಮಾಸ್ಟರ್ಸ್ ಡಿಗ್ರಿ ಮಾಡುತ್ತಿದ್ದು ಬಿ-1ಬಿ ಕಾರ್ಯಕ್ರಮದಡಿ ಕೆಲಸದ ಮೇಲೆ ಕಣ್ಣಿರಿಸಿದ್ದರು. ಈ ಕಾರ್ಯಕ್ರಮದಡಿ ಅಮೆರಿಕದ ಶಿಕ್ಷಣ ಸಂಸ್ಥೆಗಳಿಂದ ಅಡ್ವಾನ್ಸಡ್ ಡಿಗ್ರಿಗಳನ್ನು ಹೊಂದಿದವರಿಗೆ ಪ್ರತಿ ವರ್ಷ 20,000 ವೀಸಾಗಳನ್ನು ಮಂಜೂರು ಮಾಡಲಾಗುತ್ತದೆ. ಬಂಧಿತ ಆರೋಪಿಗಳು ಇಂತಹ ವೀಸಾಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವುದು ಆರೋಪವಾಗಿದೆ.

ಭಾರತೀಯ ರಾಯಭಾರಿ ಕಚೇರಿಯಿಂದ ಹಾಟ್‌ಲೈನ್ ಆರಂಭ ಬಂಧಿತ ವಿದ್ಯಾರ್ಥಿಗಳಿಗೆ ನೆರವಾಗಲು ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯು ಹಾಟ್‌ಲೈನ್ ಸಹಾಯವಾಣಿಯನ್ನು ಆರಂಭಿಸಿದೆ. ಎರಡು ದೂರವಾಣಿ ಸಂಖ್ಯೆಗಳನ್ನು ಒದಗಿಸಲಾಗಿದ್ದು, ಅಧಿಕಾರಿಗಳು ದಿನದ 24 ಗಂಟೆಯೂ ಇವುಗಳನ್ನು ನಿರ್ವಹಿಸುತ್ತಿದ್ದಾರೆ.

ಹ್ಯೂಸ್ಟನ್‌ನಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಟೆಕ್ಸಾಸ್‌ನ ಅಲ್ವರಾಡೊದ ಪ್ರೇರೀಲ್ಯಾಂಡ್ ಸ್ಥಾನಬದ್ಧತೆ ಕೇಂದ್ರದಲ್ಲಿ ಇರಿಸಲಾಗಿರುವ ಬಂಧಿತ ಭಾರತೀಯ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ.

ಭಾರತಿಯ ರಾಯಭಾರಿ ಕಚೇರಿಯ ಜೊತೆಗೆ ಅಮೆರಿಕದಲ್ಲಿರುವ ಎಲ್ಲ ಐದೂ ದೂತಾವಶಗಳು ಬಂಧಿತ ವಿದ್ಯಾರ್ಥಿಗಳಿಗೆ ನೆರವಾಗಲು ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿವೆ ಎಂದು ರಾಯಭಾರಿ ಕಚೇರಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News