ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಹತ್ಯೆ ಬೆದರಿಕೆ ಹಾಕಿದ ನಿವೃತ್ತ ಸೇನಾಧಿಕಾರಿ ಬಂಧನ

Update: 2019-02-03 14:49 GMT

ಬೆಂಗಳೂರು, ಫೆ.3: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನ ಹೆಸರಿನಲ್ಲಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಪ್ರಕರಣ ಸಂಬಂಧ ಇಲ್ಲಿನ ವಿವೇಕನಗರ ಠಾಣಾ ಪೊಲೀಸರು, ನಿವೃತ್ತ ಸೇನಾಧಿಕಾರಿಯೊರ್ವನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ನಗರದ ಬೇಗೂರು ನಿವಾಸಿಯಾಗಿರುವ ಏಕಾಂಬರ್(52) ಬಂಧಿತ ಆರೋಪಿ ಎಂದು ಹೇಳಲಾಗುತ್ತಿದೆ. ಈತ ರಕ್ಷಣಾ ಇಲಾಖೆಯಲ್ಲಿ 17 ವರ್ಷಗಳ ಕಾಲ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತನಾದ ನಂತರ ಪೇಟಿಂಗ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ವಿವೇಕ ನಗರದ ಎಎಸ್ಸಿ ಸೆಂಟರ್‌ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ ಅಶ್ವಿನಿ ಎಂಬುವರಿಗೆ ಆರೋಪಿ ಏಕಾಂಬರ್ ಪರಿಚಿತನಾಗಿದ್ದ. ಸುಲಭ ಹಣ ಸಂಪಾದನೆಗಾಗಿ ಆರೋಪಿಯು ಬೇರೆಯವರ ಮೊಬೈಲ್ ಪಡೆದು, ವಾಟ್ಸಾಪ್‌ನಲ್ಲಿ ಖಾತೆ ತೆರೆದಿದ್ದಾನೆ ಎನ್ನಲಾಗಿದೆ.

ಪೂರ್ವ ಸಂಚಿನಂತೆ ಜ.25 ರಂದು ಬೆಳಗ್ಗೆ ಅಶ್ವಿನಿ ಅವರಿಗೆ ಕರೆ ಮಾಡಿದ ಆರೋಪಿ, ನಾವು ದಾವೂದ್ ಇಬ್ರಾಹಿಂ ಸಹಚರರು, ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದೇವೆ. ಒಂದು ಕೋಟಿ ರೂ. ಹಣ ನೀಡದಿದ್ದರೆ ನಿಮ್ಮ ಸಹೋದರ ಪವನ್ ಅನ್ನು ಹತ್ಯೆಗೈದು, ಬಳಿಕ ಕುಟುಂಬಸ್ಥರನ್ನು ಹತ್ಯೆ ಮಾಡಲಾಗುವುದಾಗಿ ಹೇಳಿದ್ದ ಎಂದು ತಿಳಿದುಬಂದಿದೆ.

ಈ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬೆನ್ನಟ್ಟಿದ್ದ ಪೊಲೀಸರು ಮೊದಲು ದೂರುದಾರರ ಮೂಲಕವೇ ಆರೋಪಿಗೆ ಕರೆ ಮಾಡಿ ಬೇಡಿಕೆ ಇಟ್ಟಿದ್ದ ಹಣದ ಬದಲು 50 ಲಕ್ಷ ರೂ. ನೀಡುವುದಾಗಿ ಹೇಳಿಸಿದ್ದರು. ಬಳಿಕ ನಂಬಿಕೆ ಬರುವ ಸಲುವಾಗಿಯೇ ಸೂಟ್‌ಕೇಸ್ ಹಿಡಿದು ಆತ ಹೇಳಿದ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿ ಬಂಧಿಸಿರುವುದಾಗಿ ವಿವೇಕ ನಗರ ಪೊಲೀಸರು ಹೇಳಿದ್ದಾರೆ.

ಆರೋಪಿ ಏಕಾಂಬರ್ ವಿವಾಹವಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಐಷಾರಾಮಿ ಜೀವನ ನಡೆಸಲು ಈ ಕೃತ್ಯಕ್ಕೆ ಮುಂದಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News