ಬಿಎಂಟಿಸಿ ಬಸ್ ಚಾಲಕ-ನಿರ್ವಾಹಕರಿಗೆ ಪರೋಪಕಾರಿ ಪ್ರಶಸ್ತಿ

Update: 2019-02-03 16:37 GMT

ಬೆಂಗಳೂರು, ಫೆ.3: ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಬಸ್ ಚಾಲಕ ವೈ.ಎನ್. ಗಂಗಾಧರ್ ಮತ್ತು ನಿರ್ವಾಹಕ ಟಿ. ಶ್ರೀನಿವಾಸ್ ಅವರು ಹಾಸ್‌ಮ್ಯಾಟ್ ಆಸ್ಪತ್ರೆ ವತಿಯಿಂದ ನೀಡಲಾಗುವ ಪರೋಪಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಾಸ್‌ಮ್ಯಾಟ್ ಆಸ್ಪತ್ರೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಥಾಮಸ್ ಚ್ಯಾಂಡಿ, ಗಂಗಾಧರ್ ಮತ್ತು ಶ್ರೀನಿವಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ರಸ್ತೆಗಳಲ್ಲಿ ನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಂತಹ ಸಂದರ್ಭದಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಅದರಿಂದ ನಮಗೆ ಸಮಸ್ಯೆ ಆಗುತ್ತದೆ ಎಂದು ಕಂಡರೂ ಕಾಣದಂತೆ ಹೋಗುವವರಿದ್ದಾರೆ. ಆದರೆ ಗಾಯಾಳುವನ್ನು ನೋಡುತ್ತಲೇ ಆತನನ್ನು ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ಕೊಡಿಸುವ ಮೂಲಕ ಜೀವ ಉಳಿಸುವ ಕಾರ್ಯ ಮಾಡಿದ ಈ ಇಬ್ಬರು ಮಾನವೀಯ ಗುಣಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹ ಸ್ವಯಂ ಸೇವೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಆಸ್ಪತ್ರೆಯ ಕಳೆದ 18 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.

ಘಟನೆ ವಿವರ: ಕಳೆದ ಡಿ. 28ರ ರಾತ್ರಿ 8 ಗಂಟೆ ಎಲ್ಲರೂ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಸಮಯ. ಯಲಹಂಕ - ನೆಲಮಂಗಲ ಮಾರ್ಗದಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಪೇದೆ ಸಿದ್ದರಾಜು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆ ಬದಿ ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಿದ್ದ ಅವರನ್ನು ಜನರು ನೋಡಿಕೊಂಡು ಹೋಗುತ್ತಿದ್ದರು. ಆದರೆ ಯಾರೂ ನೆರವಿಗೆ ಧಾವಿಸಲಿಲ್ಲ. ಈ ವೇಳೆ ರೂಟ್ ನಂ.407ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ್ ಮತ್ತು ಶ್ರೀನಿವಾಸ್ ಸಿದ್ದರಾಜು ಸ್ಥಿತಿ ನೋಡಿ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾದಾಗ, ಅಪಘಾತಕ್ಕೆ ಇವರೇ ಕಾರಣ ಎಂದು ಸಾರ್ವಜನಿಕರು ಅವರ ಮೇಲೆ ಮುಗಿಬಿದ್ದಿದ್ದಾರೆ. ಆಗ ಬಸ್‌ನಲ್ಲಿದ್ದ ಪ್ರಯಾಣಿಕರು ಘಟನೆಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ನಂತರ ಬಸ್‌ನಲ್ಲಿಯೇ ಸಿದ್ದರಾಜುರನ್ನು ಆಸ್ಪತ್ರೆಗೆ ಕರೆದು ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯ ನಿರ್ದೇಶಕ ಡಾ. ಅಜಿತ್ ಬಿ. ರಾಯನ್ ಹಾಗೂ ಡಾ. ವಿವೇಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News