ಇಂಜಿನಿಯರ್ ಅಪಹರಣ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2019-02-04 13:18 GMT

ಬೆಂಗಳೂರು, ಫೆ.4: ತಮಿಳುನಾಡಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ಇನ್ಫೋಸಿಸ್ ಕಂಪೆನಿಯ ಸಾಫ್ಟ್‌ವೇರ್ ಇಂಜಿನಿಯರ್ ಅನುರಾಗ್ ಶರ್ಮಾ ಅಪಹರಣ ಆರೋಪ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಇಲ್ಲಿನ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆನೇಕಲ್‌ನ ಸುರಜಕ್ಕನ ಹಳ್ಳಿಯ ಗಣೇಶ (29), ಶ್ರೀಧರ (30), ಉಮೇಶ (20) ಎಂಬ ಮೂವರನ್ನು ಬಂಧಿಸಲಾಗಿದ್ದು, ಇದೇ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವೇಣುಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ, ಜೈಲಿಗೆ ಹೋಗಿ ಇತ್ತೀಚೆಗೆ ಬಿಡುಗಡೆಯಾಗಿ ಬಂದಿದ್ದ ಗಣೇಶ ಇತರ ಆರೋಪಿಗಳಾದ ಶ್ರೀಧರ, ಉಮೇಶ ಹಾಗೂ ವೇಣು ಜತೆ ಗುಂಪು ಕಟ್ಟಿಕೊಂಡು ಪರಪ್ಪನ ಅಗ್ರಹಾರ, ಸೂರ್ಯ ನಗರ ಇನ್ನಿತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಲಿಗೆ ಕೃತ್ಯದಲ್ಲಿ ತೊಡಗಿದ್ದರು ಎನ್ನಲಾಗಿದೆ.

ಆರೋಪಿ ಗಣೇಶ ತನ್ನ ಗುಂಪಿನ ಜತೆ ಸಂಬಂಧಿಯಾದ ಶೋಭರಾಜ್‌ನನ್ನು ದ್ವೇಷದಿಂದ ಕೊಲೆ ಮಾಡಲು ಸಂಚು ರೂಪಿಸಿದ್ದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದು, ಬಂಧಿತ ಆರೋಪಿಗಳಿಂದ ಕಾರು ಜಪ್ತಿ ಮಾಡಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

ಏನಿದು ಪ್ರಕರಣ?

ಚೆನ್ನೈನಲ್ಲಿ ಇನ್ಫೋಸಿಸ್ ಕಂಪೆನಿಯ ಸಾಫ್ಟ್‌ವೇರ್ ಇಂಜಿನಿಯರ್ ಅನುರಾಗ್ ಶರ್ಮಾ ಅವರು ಜ.1 ರಂದು ಮುಂಜಾನೆ 1 ಗಂಟೆ ಸುಮಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ವೀರಸಂದ್ರ ಕೈಗಾರಿಕಾ ಪ್ರದೇಶದ ಬಳಿ ತಮಿಳುನಾಡಿನ ಕಡೆಗೆ ಹೋಗುವ ಬಸ್‌ಗಾಗಿ ಕಾಯುತ್ತಿದ್ದರು.

ಈ ವೇಳೆ ವ್ಯಾನ್‌ನಲ್ಲಿ ಬಂದಿದ್ದ ಆರೋಪಿಗಳು, ಡ್ರಾಪ್ ಕೊಡುವುದಾಗಿ ವ್ಯಾನ್‌ನಲ್ಲಿ ಹತ್ತಿಸಿಕೊಂಡು ಸ್ವಲ್ಪದೂರ ಹೋದ ನಂತರ ಹಲ್ಲೆ ನಡೆಸಿ, ಕಾಲು ಕಟ್ಟಿ, ಬೆದರಿಸಿ ಕ್ರೆಡಿಟ್, ಡೆಬಿಟ್ ಕಾರ್ಡುಗಳನ್ನು ಕಸಿದು ಅವುಗಳ ಪಿನ್ ನಂಬರ್ ಪಡೆದು 45 ಸಾವಿರ ತೆಗೆದಿದ್ದರು. ವ್ಯಾನ್‌ನಲ್ಲಿ ಸುತ್ತಾಡಿಸಿ, ಸೂರ್ಯ ನಗರದ ನಾಗನಾಯಕನ ಹಳ್ಳಿ ಬಳಿ ಕೆಳಗೆ ನೂಕಿ ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿಗಳ ಬಂಧನದಿಂದ ಪರಪ್ಪನ ಅಗ್ರಹಾರ, ಸೂರ್ಯನಗರದ 2 ಸುಲಿಗೆ, ನಾಗಮಂಗಲದ ಕಾರು ಕಳವು ಸೇರಿ 3 ಪ್ರಕರಣಗಳು ಪತ್ತೆಯಾಗಿದ್ದು, ಕೊಲೆ, ಕೊಲೆಯ ಸಂಚು ವಿಫಲಗೊಳಿಸಲಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News