ಹಿಂದೂ ಮಹಾಸಭಾ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಲು ಈಶ್ವರ್ ಖಂಡ್ರೆ ಆಗ್ರಹ

Update: 2019-02-04 14:31 GMT

ಬೆಂಗಳೂರು, ಫೆ.4: ಹುತಾತ್ಮ ದಿನದಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ಯೆ ಕೃತ್ಯ ಮರುಸೃಷ್ಟಿಸಿ ಸಂಭ್ರಮಿಸಿರುವ ಹಿಂದೂ ಮಹಾಸಭಾ ನಾಯಕರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ನಾಯಕರು ಒಕ್ಕೂರಲಿನಿಂದ ಆಗ್ರಹಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮ ದಿನದಂದು ಹಿಂದೂ ಮಹಾಸಭಾದ ನಾಯಕಿ ಪೂಜಾ ಶಕುನ್ ಪಾಂಡೆ, ಪಿಸ್ತೂಲಿನಿಂದ ಗುಂಡು ಹಾರಿಸಿ, ಸಂಭ್ರಮಿಸಿದ ಹೇಯ ಕೃತ್ಯ ಖಂಡಿಸಿ ಸೋಮವಾರ ನಗರದಲ್ಲಿ ಕಾಂಗ್ರೆಸ್ ಕಚೇರಿ ಮುಂಭಾಗ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶೀಸಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಎಚ್.ಕೆ.ಪಾಟೀಲ್, ಗಾಂಧೀಜಿ ಸತ್ಯ, ಅಹಿಂಸೆ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಇಂದು ಗಾಂಧೀಜಿ ಕೊಂದವರನ್ನು ಆರಾಧಿಸಲಾಗುತ್ತಿದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮ ದಿನಾಚರಣೆ ಎಂದು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಮತ್ತೊಂದು ಕಡೆ ಬಿಜೆಪಿ ಬೆಂಬಲಿತ ಸಂಘಟನೆಗಳು ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ಆರಾಧಿಸುತ್ತಿದೆ. ಗಾಂಧೀಜಿ ಹತ್ಯೆ ಪ್ರಕರಣವನ್ನು ಮರು ಸೃಷ್ಟಿ ಮಾಡಿ ಗಾಂಧೀಜಿ ಅನುಯಾಯಿಗಳಿಗೆ ಸಂಘ ಪರಿವಾರದವರು ಸವಾಲೊಡ್ಡುತ್ತಿದ್ದಾರೆ ಎಂದು ಹೇಳಿದರು.

ಅವರನ್ನು ಬಂಧಿಸಿ ಕೂಡಲೇ ಉಗ್ರ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ದೇಶ ದ್ರೋಹಿಗಳನ್ನು ಬೆಂಬಲಿಸಿದ ಬಿಜೆಪಿಯವರನ್ನು ಮುಂದಿನ ದಿನಗಳಲ್ಲಿ ಹಳ್ಳಿಗಳಿಗೆ ಕಾಲಿಡದಂತಹ ಹೋರಾಟಗಳನ್ನು ಜನ ಕೈಗೆತ್ತಿಕೊಳ್ಳುತ್ತಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ಗಾಂಧೀಜಿ ಹತ್ಯೆಯ ಮರುಸೃಷ್ಟಿ ಮಾಡಿದವರು ದೇಶ ದ್ರೋಹಿಗಳು. ನಾಲ್ಕು ದಿನಕಳೆದರೂ ಅಂತಹ ದೇಶ ದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪ್ರತಿಭಟನೆಯ ನಂತರ ಕಾಂಗ್ರೆಸ್ ಭವನದಿಂದ ಆನಂದ್‌ ರಾವ್ ವೃತ್ತದವರೆಗೂ ಪಾದಯಾತ್ರೆ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಮಹಿಳಾ ಕಾಂಗ್ರೆಸ್ ವತಿಯಿಂದ ಪೂಜಾ ಶಕುನ್ ಪಾಂಡೆ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಯಿತು. ವಿಧಾನಪರಿಷತ್ತಿನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಶಾಸಕ ನಂಜಯ್ಯಮಠ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News