×
Ad

ಐಟಿ ದಾಳಿ ಪ್ರಕರಣ: ಇಡಿ ಸಮನ್ಸ್ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ.ಶಿವಕುಮಾರ್

Update: 2019-02-04 20:06 IST

ಬೆಂಗಳೂರು, ಫೆ.4: ಹೊಸದಿಲ್ಲಿಯಲ್ಲಿರುವ ತನ್ನ ಫ್ಲಾಟ್‌ಗಳ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ(ಇಡಿ) ನೀಡಿರುವ ಸಮನ್ಸ್ ರದ್ದುಗೊಳಿಸಬೇಕೆಂದು ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಾಗಿದೆ.

ಪ್ರಕರಣವೇನು: ಹೊಸದಿಲ್ಲಿಯ ಆರ್.ಕೆ.ಪುರಂನ ಮನೆ, ಸಫ್ದರ್‌ಜಂಗ್ ಎನ್‌ಕ್ಲೇವ್ ಫ್ಲ್ಯಾಟ್‌ಗಳಿಂದ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ 8.60 ಕೋಟಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸುನೀಲ್ ಕುಮಾರ್ ಶರ್ಮಾ ಅವರಿಗೆ ಸೇರಿದ ಫ್ಲಾಟ್‌ನಿಂದ ವಶಪಡಿಸಿಕೊಂಡ 6.68 ಕೋಟಿಯನ್ನು ಬೆಂಗಳೂರಿನಿಂದ ಹವಾಲಾ ಮಾರ್ಗದಲ್ಲಿ ಕಳಿಸಲಾಗಿದೆ ಎಂಬುದು ಆರೋಪ.

ಡಿ.ಕೆ.ಶಿವಕುಮಾರ್ ಮತ್ತವರ ಆಪ್ತರ ಮನೆ, ಕಚೇರಿಗಳ ಮೇಲೆ ರೇಡ್ ಮಾಡಿದ್ದ ಐಟಿ ಅಧಿಕಾರಿಗಳು ತಮಗೆ ದೊರೆತ ದಾಖಲೆಗಳ ಆಧಾರದಲ್ಲಿ ವರದಿಯೊಂದನ್ನು ತಯಾರಿಸಿದೆ. ಆರೋಪಿಗಳು ಬರೆದಿದ್ದ ಡೈರಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದ ಐಟಿ ಇಲಾಖೆ 33 ಪುಟಗಳ ತನಿಖಾ ವರದಿಯನ್ನು ತಯಾರಿಸಿದೆ. ಇದರಲ್ಲಿ ಆರೋಪಗಳನ್ನ ಪಟ್ಟಿ ಮಾಡಲಾಗಿದೆ. ಅದೇ ವರದಿಯನ್ನು ಇಡಿಗೆ ಹಸ್ತಾಂತರಿಸಲಾಗಿದ್ದು, ಇದರ ಆಧಾರದಲ್ಲೇ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಡೈರಿ ಒಂದು ಸಿಕ್ಕಿತ್ತು. ಈ ಡೈರಿಯಲ್ಲಿ ಕೆ.ಜಿ ಎಂಬ ಕೋಡ್ ವರ್ಡ್ ಇತ್ತು. ಈ ಕೋರ್ಡ್ ವರ್ಡ್‌ನಲ್ಲಿ ಹಣ ವ್ಯವಹಾರ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ 4ನೆ ಪ್ರಕರಣ ಇದಾಗಿದೆ. ಈ ಕೇಸ್‌ನಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಹವಾಲ ಆರೋಪ ಇದೆ. ಬೆಂಗಳೂರಿನಿಂದ ಹೊಸದಿಲ್ಲಿಗೆ ಹವಾಲ ಮಾರ್ಗದಲ್ಲಿ ಹಣ ಕಳುಹಿಸಿದ ಆರೋಪ ಇದೆ. ಹೊಸದಿಲ್ಲಿಯಲ್ಲಿ ಸಿಕ್ಕ 8.5 ಕೋಟಿ ಹವಾಲ ಹಣ ಎಂದು ಐಟಿ ಅಧಿಕಾರಿಗಳು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News