ಪ್ರಧಾನಿ ಮೋದಿಯಂತೆ ಡೋಂಗಿ ಬಜೆಟ್ ಮಂಡಿಸಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-02-04 14:44 GMT

ಬೆಂಗಳೂರು, ಫೆ.4: ನಾನು ಖಂಡಿತವಾಗಿಯೂ ಫೆ.8ರಂದು ರಾಜ್ಯದ ಬಜೆಟ್ ಮಂಡಿಸುತ್ತೇನೆ. ಆದರೆ, ಪ್ರಧಾನಿ ನರೇಂದ್ರ ಮೋದಿಯಂತೆ ನಾನು ಡೋಂಗಿ ಬಜೆಟ್ ಮಂಡಿಸುವುದಿಲ್ಲ. ನಮ್ಮ ಸರಕಾರ ಎಲ್ಲರ ಬಜೆಟ್ ಮಂಡಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ಪದ್ಮನಾಭನಗರದಲ್ಲಿನ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಪ್ರತಿ ನಿತ್ಯ ಪ್ರತಿ ಗಂಟೆ ಆಪರೇಷನ್ ಕಮಲ ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಯಾವ ಮುಖಂಡರು, ಯಾವ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ. ಯಾವ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂಬ ಮಾಹಿತಿ ನನಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ನಾಯಕರಿಗೆ ಅಷ್ಟೊಂದು ಪ್ರಮಾಣದಲ್ಲಿ ದುಡ್ಡು ಎಲ್ಲಿಂದ ಬರುತ್ತಿದೆ? ಶಾಸಕರಿಗೆ ಅವರು ಒಡ್ಡುತ್ತಿರುವ ಆಮಿಷಗಳನ್ನು ಕೇಳಿದರೆ ಶಾಕ್ ಆಗುತ್ತದೆ. ನನ್ನಿಂದ ಆಪರೇಷನ್ ಕಮಲಕ್ಕೆ ಯಾವ ಅಡ್ಡಿಯೂ ಇಲ್ಲ. ಬಿಜೆಪಿಯವರಿಗೆ ಏನು ಬೇಕೋ ಅದನ್ನು ಅವರು ಸಂತೋಷವಾಗಿ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ತಿಳಿಸಿದರು.

ಮೋದಿ ಭ್ರಷ್ಟಾಚಾರ ನಿಯಂತ್ರಣ, ವಿದೇಶದಿಂದ ಕಪ್ಪು ಹಣ ಹಿಂತರುವ ಬಗ್ಗೆ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ನೋಡಿದರೆ ಬಿಜೆಪಿಯವರು ಆಡಳಿತ ಪಕ್ಷದ ಶಾಸಕರಿಗೆ ಭಾರೀ ಮೊತ್ತದ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ(ಸ್ಟೀಲ್ ಬ್ರಿಡ್ಜ್) ನಿರ್ಮಿಸುವ ವಿಚಾರವನ್ನು ನಾನು ಬೆಂಗಳೂರು ನಗರದ ಜನರ ಅಭಿಪ್ರಾಯಕ್ಕೆ ಬಿಟ್ಟಿದ್ದೇನೆ. ನನಗೆ ಸ್ಟೀಲ್ ಬ್ರಿಡ್ಜ್ ಕಟ್ಟಿಕೊಂಡು ಏನಾಗಬೇಕು. ಬೆಂಗಳೂರು ನಗರದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News